ಹೊಸದಿಗಂತ ವರದಿ, ಯಲ್ಲಾಪುರ :
ಮೇಯಲು ಬಿಟ್ಟಿದ್ದ ಹೋರಿಯೊಂದನ್ನು ದುಷ್ಕರ್ಮಿಗಳು ಕಡಿದು,ಅದರ ರುಂಡವನ್ನು ಕಾಡಿನಲ್ಲಿ ಎಸೆದಿರುವ ಘಟನೆ ತಾಲೂಕಿನ ಮಂಚಿಕೇರಿಯ ವ್ಯಾಪ್ತಿಯ ಬಿಳಕಿ ಗ್ರಾಮದಲ್ಲಿ ಕಂಡು ಬಂದಿದೆ.
ಬಿಳಕಿ ಗ್ರಾಮದ ಈಶ್ವರ ನಾಯ್ಕ ಎಂಬುವವರು, ದಿ.28 ರಂದು ಚಂದ್ರಿಕಾ ನಾಯ್ಕ ಎಂಬುವವರಿಗೆ ಸೇರಿದ 2 ಆಕಳು ಹಾಗೂ 1 ಹೋರಿಯನ್ನು ಬೆಳಿಗ್ಗೆ ಮೇಯಲು ಬಿಟ್ಟು, ಸಂಜೆ ಕೊಟ್ಟಿಗೆಯನ್ನು ನೋಡಿದಾಗ ಕೇವಲ 2 ಆಕಳು ಹಿಂದಿರುಗಿರುವುದು ಕಂಡು ಬಂದಿದೆ. ಮಾರನೆ ದಿನ ಬೆಳಗ್ಗೆ ಊರಿನ ಜನರೊಂದಿಗೆ ಕಾಡಿನಲ್ಲಿ ಹುಡುಕಿದಾಗ ಹೋರಿಯ ಮುಖ ಹಾಗೂ ದೇಹದ ಚರ್ಮದ ಭಾಗಗಳು ಕಾಡಿನಲ್ಲಿ ದೊರೆತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಪಶು ವೈದ್ಯರು ತೆರಳಿ ಪರಿಶೀಲಿಸಿದಾಗ, ಕಾಡು ಪ್ರಾಣಿ ತಿಂದಿರಬಹುದು ಅಥವಾ ಯಾರೋ ಆರೋಪಿತರು ಈ ರೀತಿ ಮಾಡಿರಬಹುದೆಂದು ಸಂಶಯ ವ್ಯಕ್ತಪಿಡಿಸಿದ್ದಾರೆ.
ಗೋವುಗಳನ್ನು ಕದ್ದೊಯ್ಯುವ ಘಟನಾವಳಿಗಳ ನಡುವೆ, ಗೋವು ಕಡಿದು ಕೊಂದಿರುವ ಶಂಕೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.