ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಬೀರೂರಿನಲ್ಲೂ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ನಡೆದಿದೆ.
ಧಾರವಾಡ-ಬೆಂಗಳೂರಿನ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕೆಲ ದಿನಗಳ ಹಿಂದೆಯಷ್ಟೇ ದಾವಣಗೆರೆಯಲ್ಲಿ ಕಲ್ಲು ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಕ್ಕಳನ್ನ ವಶಕ್ಕೆ ಪಡೆದಿದ್ದಾರೆ. ಈಗ ಅದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ಬೀರೂರಿನಲ್ಲೂ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಇಂದು ಬೆಳಗ್ಗೆ 8.45ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು-ಅರಸೀಕರೆ ನಡುವೆ ಸಂಚರಿಸುತ್ತಿದ್ದ ವೇಳೆ ಕಿಡಿಗೇಡಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಕಲ್ಲು ತೂರಾಟ ನಡೆಸಿದ್ದಾರೆ.
ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ಎಸೆದವರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಇನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ರೈಲು ಪರಿಶೀಲನೆ ಮಾಡಲಾಗುತ್ತಿದೆ.