ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಷ್ಕರ್ಮಿಗಳ ಗುಂಪೊಂದು ವೈದ್ಯರ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದು, ಪರಿಣಾಮ ಮನೆಯ ಸೆಕ್ಯೂರಿಟಿ ಗಾರ್ಡ್ ಗಾಯಗೊಂಡು, 45 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ಬಾಪೂಜಿ ಲೇಔಟ್‌ನಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಬಾಪೂಜಿ ಲೇಔಟ್‌ನ 4 ನೇ ಕ್ರಾಸ್‌ನಲ್ಲಿರುವ ಡಾ. ಬಿ.ಎಸ್. ಗಂಗಾಧರ್ (67) ಅವರ ಮನೆಗೆ ನಾಲ್ವರು ದುಷ್ಕರ್ಮಿಗಳಿದ್ದ ಗುಂಪೊಂದು ಶನಿವಾರ ಬೆಳಗಿನ ಜಾವ 12.20 ರಿಂದ 12.25 ರ ನಡುವೆ ಬೆಂಕಿ ಹಚ್ಚಿದ್ದಾರೆ. ಘಟನೆ ವೇಳೆ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ತ್ಯಾಗರಾಜ್ ಅವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ವೈದ್ಯ ಗಂಗಾಧರ್ (44) ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ, ಕಳೆದ ಎಂಟು ವರ್ಷಗಳಿಂದ ತಮ್ಮ ಕುಟುಂಬದೊಂದಿಗೆ ಆ ಮನೆಯಲ್ಲಿ ವಾಸಿಸುತ್ತಿದ್ದು, ಬೆಂಕಿ ಅವಘಡದಲ್ಲಿ 45 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಜುಲೈ 30 ರಂದು, ವಿಜಯನಗರದ ಎಂಆರ್‌ಬಿಹೆಚ್ ಕಾಲೋನಿಯಲ್ಲಿರುವ ನನ್ನ ಪುತ್ರ ಡಾ. ತುಷಾರ್’ಗೆ ಸೇರಿದ ಫಾರ್ಮಾ ಕಂಪನಿಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು, ಇಬ್ಬರು ದುಷ್ಕರ್ಮಿಗಳು ಕಂಪನಿಯ ಬಾಗಿಲುಗಳಿಗೆ ಬೆಂಕಿ ಹಚ್ಚಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರು ವ್ಯಕ್ತಿಗಳು ಕಂಪನಿಯ ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದಿದ್ದರು ಎಂದು ಹೇಳಿದ್ದಾರೆ.
ಘಟನೆ ಸಂಬಂಧ ತುಷಾರ್ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎರಡೂ ಪ್ರಕರಣಗಳು ತನಿಖೆಯಲ್ಲಿವೆ. ಎಲ್ಲಾ ಪ್ರಕರಣಗಳು ಒಂದೇ ರೀತಿಯ ಮಾದರಿಯನ್ನು ಹೊಂದಿರುವುದರಿಂದ, ದೂರುದಾರರಿಗೆ ತಿಳಿದಿರುವ ಯಾರಾದರೂ ಈ ಘಟನೆಗಳ ಹಿಂದೆ ಇರಬೇಕೆಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.