ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್ ಗೆ ಮೂವರು ಮುಸುಕುಧಾರಿಗಳು ಬೆಂಕಿ (Fire) ಹೆಚ್ಚಿ ಓಡಿ ಹೋಗಿದ್ದು,ಐವರು ಗಾಯಗೊಂಡಿರುವ ಘಟನೆ ನಡೆದಿದೆ.
ಪೂರ್ವ ಲಂಡನ್‌ನ (London) ಗ್ಯಾಂಟ್ಸ್ ಹಿಲ್‌ನ ವುಡ್‌ಫೋರ್ಡ್ ಅವೆನ್ಯೂದಲ್ಲಿರುವ ಭಾರತೀಯ ರೆಸ್ಟೋರೆಂಟ್‌ನೊಳಗಿನಿಂದ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಹೊರಗೆ ಓಡಿ ಬರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಬೆಂಕಿ ಉಂಡೆಯಂತೆ ಕಾಣುತ್ತಿತ್ತು ಎಂದು ಪ್ರತ್ಯೇಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಜನ ಸಂದಣಿ ಹೆಚ್ಚಿತ್ತು. ಆಗ ಒಳಗೆ ಬಂದ ಮೂವರು ಮುಸುಕುಧಾರಿಗಳು ನೆಲದ ಮೇಲೆ ದ್ರವ ಎಸೆದು ಬೆಂಕಿ ಹಚ್ಚಿದರು. ಕೂಡಲೇ ಬೆಂಕಿಯ ಜ್ವಾಲೆ ರೆಸ್ಟೋರೆಂಟ್ ಒಳಗೆ ಆವರಿಸಿತು. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಗ್ರಾಹಕರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಒಟ್ಟು ಐವರು ಗಾಯಗೊಂಡಿದ್ದಾರೆ.
ರೆಸ್ಟೋರೆಂಟ್ ಒಳಗೆ ಊಟ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಲಂಡನ್ ಆಂಬ್ಯುಲೆನ್ಸ್ ಸೇವೆಯ ಅರೆವೈದ್ಯರು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ 15 ವರ್ಷದ ಬಾಲಕ ಮತ್ತು 54 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅವರಿಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.