ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಪ್ಪ ಸೇವನೆಯಿಂದ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಹರಡಿದ್ದು, ಸರಿಯಾದ ರೀತಿಯಲ್ಲಿ ತಯಾರಿಸಿದ ದೇಶಿ ಗೋವಿನ ತುಪ್ಪ ಆರೋಗ್ಯಕ್ಕೆ ಹಿತಕರವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಭಾನುವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ತುಪ್ಪದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದಿಂದ ಕೋಟ್ಯಂತರ ಜನರು ಅದನ್ನು ಆಹಾರದಿಂದ ದೂರವಿಟ್ಟಿದ್ದಾರೆ ಎಂದು ಹೇಳಿದರು. ಜರ್ಸಿ ಗೋವಿನ ತುಪ್ಪ, ವನಸ್ಪತಿ ಅಥವಾ ಕಲಬೆರಕೆ ತುಪ್ಪದ ಗುಣಮಟ್ಟವನ್ನು ಆಧರಿಸಿ ದೇಶಿ ಗೋವಿನ ತುಪ್ಪವನ್ನೂ ಆರೋಗ್ಯಕ್ಕೆ ಹಾನಿಕರ ಎಂದು ಹೇಳುವುದು ಸರಿಯಲ್ಲ ಎಂದರು.
ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ ಹಾಗೂ ಬೆಣ್ಣೆಯಿಂದ ತುಪ್ಪ ತಯಾರಿಸುವುದು ಪಾರಂಪರಿಕ ವಿಧಾನವಾಗಿದೆ. ಆದರೆ ಇತ್ತೀಚೆಗೆ ಹಾಲಿನ ಕೆನೆಯನ್ನು ಹಲವು ದಿನಗಳ ಕಾಲ ಸಂಗ್ರಹಿಸಿ, ಅದರಿಂದ ನೇರವಾಗಿ ತುಪ್ಪ ತಯಾರಿಸುವ ಪದ್ಧತಿ ಹೆಚ್ಚಾಗಿದೆ. ಇದು ಸಾಂಪ್ರದಾಯಿಕ ವಿಧಾನವಲ್ಲ ಮತ್ತು ಅದನ್ನು ನಿಜವಾದ ತುಪ್ಪ ಎಂದು ಪರಿಗಣಿಸಲಾಗದು ಎಂದು ರಾಘವೇಶ್ವರ ಶ್ರೀ ಅಭಿಪ್ರಾಯಪಟ್ಟರು.
ಭಾರತೀಯ ವೇದ ವಾಙ್ಮಯದಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಆಹಾರದಲ್ಲಿ ತುಪ್ಪದ ಬಳಕೆಯಿಂದ ಜಠರಾಗ್ನಿ ವೃದ್ಧಿಯಾಗುತ್ತದೆ ಹಾಗೂ ಬುದ್ಧಿಶಕ್ತಿ ಮತ್ತು ಆಯಸ್ಸಿಗೂ ತುಪ್ಪದೊಂದಿಗೆ ಸಂಬಂಧವಿದೆ ಎಂದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು. ಪ್ರಕೃತಿ ನೀಡಿರುವ ಸತ್ವಯುತ ಆಹಾರ ಪದಾರ್ಥಗಳನ್ನು ದೂರವಿಡದೆ, ಅವುಗಳ ನೈಜ ಗುಣವನ್ನು ಅರಿತು ಬಳಸಬೇಕು ಎಂದು ಸಲಹೆ ನೀಡಿದರು.

ಭಾಗವತದಲ್ಲಿ ಶ್ರೀಕೃಷ್ಣನ ದಿನಚರಿಯ ಉಲ್ಲೇಖವಿದ್ದು, ಪ್ರಾತಃಕಾಲದಲ್ಲಿ ಶೌಚಾದಿಗಳ ನಂತರ ತುಪ್ಪದಲ್ಲಿ ಮುಖವನ್ನು ನೋಡಿಕೊಂಡ ಎಂಬ ವಿವರ ಇದೆ. ಭಾರತೀಯವಾದ ಹಲವಾರು ಪ್ರಾಚೀನ ಗ್ರಂಥಗಳಲ್ಲಿಯೂ ಪ್ರಾತಃ ಕಾಲ ತುಪ್ಪದಲ್ಲಿ ಮುಖವನ್ನು ನೋಡಿ ಕೊಳ್ಳುವುದು ಪರಮ ಶುಭ ಎಂದು ಹೇಳಲಾಗಿದ್ದು, ಮಂಗಲ ದ್ರವ್ಯದ ದರ್ಶನದಿಂದ ಜೀವನವು ಮಂಗಲಮಯವಾಗುತ್ತದೆ. ಸುಗಂಧ ಮನಸ್ಸನ್ನು ಸಂತುಷ್ಟಗೊಳಿಸುವ ಜೊತೆಗೆ ಸತ್ವಗುಣವನ್ನೂ ಜಾಗೃತಗೊಳಿಸುತ್ತದೆ ಎಂದು ಶ್ರೀಗಳು ವಿವರಿಸಿದರು. ತುಪ್ಪದ ಕಲಬೆರಕೆ ಹಾಗೂ ಗೋವಿನ ತಳಿಗಳ ವಿಚಾರದಲ್ಲಿ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ದೇಶಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:
ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ದೇಶಭಂಡಾರಿ ಸಮಾಜದಿಂದ ಗುರುಪರಂಪರೆಗೆ ಸ್ವರ್ಣಪಾದುಕಾ ಪೂಜೆ ಸಮರ್ಪಿತವಾಯಿತು. ಪಾದುಕಾ ಪೂಜೆ ಸ್ವೀಕರಿಸಿದ ಶ್ರೀಗಳು, ಸಮಾಜವನ್ನು ಆಶೀರ್ವದಿಸಿದರು. ಬಾಬು ಭಂಡಾರಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಮೈಸೂರು, ದಾವಣಗೆರೆ, ಹರಿಹರ ಹವ್ಯಕ ವಲಯಗಳ ಪರವಾಗಿ ಶಂಕರನಾರಾಯಣ ಶಾಸ್ತ್ರಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಧೇಶ್ಯಾಮ್ ಅಗರ್ವಾಲ್, ಮುಂಟು ಅಗರ್ವಾಲ್, ಅರುಣ್ ಹೆಗಡೇ ದಾವಣಗೆರೆ, ಡಾ. ಎಸ್. ಆರ್. ಹೆಗಡೆ ದಾವಣಗೆರೆ, ಗೋಕರ್ಣದ ಪೋಲಿಸ್ ಅಧಿಕಾರಿ ಅನಿಲ್ ಕುಮಾರ್, ನಾಗರಾಜ ಪೆದಮಲೆ ದಂಪತಿ ದಿನಪ್ರಧಾನರಾಗಿ ಉಪಸ್ಥಿತರಿದ್ದರು.



