ಹೊಸದಿಗಂತ ಡಿಜಿಟಲ್ ಡೆಸ್ಕ್:
ಥೈಲ್ಯಾಂಡ್‌ನಲ್ಲಿ ನಡೆದ ಮಿಸ್ ಯುನಿವರ್ಸ್ ಪ್ರಿಲಿಮಿನರಿ ಸ್ಪರ್ಧೆಯಲ್ಲಿ ನಡೆದ ಘಟನೆಯೊಂದು ವಿಶ್ವದ ಗಮನ ಸೆಳೆದಿದೆ. ಮಿಸ್ ಜಮೈಕಾ ಗ್ಯಾಬ್ರಿಯೆಲ್ ಹೆನ್ರಿ ಈವ್ನಿಂಗ್ ಗೌನ್ ಪ್ರದರ್ಶನದ ವೇಳೆ ರ‍್ಯಾಂಪ್ ನ ಅಂಚಿನಿಂದ ಜಾರಿ ಕೆಳಕ್ಕೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
28 ವರ್ಷದ ಸ್ಪರ್ಧಿ ಕಿತ್ತಳೆ ಬಣ್ಣದ ಗ್ಲಾಮರ್ ಗೌನ್‌ನಲ್ಲಿ ನಡೆಯುತ್ತಿದ್ದಾಗ ಅಕಸ್ಮಾತಾಗಿ ಕಾಲು ಜಾರಿ ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ. ಆ ಕೂಡಲೇ ಆಕೆಯನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಈ ಬಗ್ಗೆ ಮಿಸ್ ಯುನಿವರ್ಸ್ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಗ್ಯಾಬ್ರಿಯೆಲ್ ಹೆನ್ರಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದೆ. ಆಕೆಗೆ ಸಣ್ಣ ಗಾಯಗಳಾಗಿದ್ದು, ಬ್ಯಾಂಕಾಕ್‌ನ ಆಸ್ಪತ್ರೆಯಲ್ಲಿ ಪೂರ್ತಿ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿದೆ.

