ದಿಗಂತ ವರದಿ ಮಡಿಕೇರಿ :
ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯ ಕುಟ್ಟಂದಿ ಭಾಗದಲ್ಲಿ ನಡೆದ ಹುಲಿ ದಾಳಿ ಪ್ರದೇಶಕ್ಕೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ತಿತಿಮತಿ ಭಾಗದ ಎಸಿಎಫ್ ಉತ್ತಪ್ಪ ಅವರನ್ನು ಕರೆಸಿಕೊಂಡ ಶಾಸಕರು, ಹುಲಿ ಹಾವಳಿಯ ಬಗ್ಗೆ ಇಲಾಖೆಯ ಸಿಬ್ಬಂದಿಗಳು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಅಲ್ಲದೆ ಕೂಡಲೇ ಇಲಾಖೆಯ ನಿಯಮದಡಿಯಲ್ಲಿ ಪರಿಹಾರವನ್ನು ಸಂಬಂಧಿಸಿದ ಮಾಲಕರಿಗೆ ನೀಡುವಂತೆ ಸೂಚಿದರು.
ಹುಲಿ ಸೆರೆಗೆ ಸೂಚನೆ:ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಹುಲಿ ಸೆರೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಶಾಸಕರು, ಗಾಯಗೊಂಡ ಹಸುವಿಗೆ ನಿರಂತರ ಚಿಕಿತ್ಸೆ ನೀಡುವಂತೆಯೂ ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ಹಿರಿಯ ಮುಖಂಡ ತೀತಮಾಡ ಲಾಲ ಭೀಮಯ್ಯ ಮಾತನಾಡಿ, ಹುಲಿಯನ್ನು ಸೆರೆಹಿಡಿಯುವ ಸಲುವಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಮದ್ರೀರ ಗಿರೀಶ್, ಶಕ್ತಿ ಕೇಂದ್ರದ ಪ್ರಮುಖ್ ಬಲ್ಲಡಿಚಂಡ ವಿಜು ಕಾರ್ಯಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗ್ರಾಮದ ಪ್ರಮುಖರಾದ ಅಮ್ಮೆಕಂಡ ಜಿಮ್ಮಿ ಚಂಗಪ್ಪ, ವಿಖ್ಯಾತ್ ಬೆಳ್ಯಪ್ಪ, ಬಾನಂಡ ಸಂಪತ್, ಅಶೋಕ್, ಜಾನುವಾರು ಮಾಲಕ ಅಣ್ಣೀರ ಹರಿ ಮತ್ತಿತರರು ಹಾಜರಿದ್ದರು.