ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ, ಹಿರಿಯ ಗುತ್ತಿಗೆದಾರ ಎಂ.ಪಿ.ರಮೇಶ್‌ರ ಪುತ್ರ ಎಂ.ಆರ್.ಚಂದ್ರಶೇಖರ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇಡೀ ಶಾಸಕರ ಕುಟುಂಬ ಈಗ ತೀವ್ರ ಆತಂಕಕ್ಕೆ ಸಿಲುಕಿದೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ದಾವಣಗೆರೆ ಪೊಲೀಸರು, ಪತ್ತೆ ಕಾರ್ಯವನ್ನು ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯಅವರ ಸಹೋದರನ ಪುತ್ರ ಚಂದ್ರಶೇಖರ್ ಕಾಣೆಯಾಗಿದ್ದಾನೆ .
ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಹೋಗಿ ಬರುವುದಾಗಿ ಅ.೩೦ರಂದು ರಾತ್ರಿ ೭.೩೦ಕ್ಕೆ ಹೋದ ಎಂ.ಆರ್.ಚಂದ್ರಶೇಖರ ಈವರೆಗೆ ಮನೆಗೆ ಬಂದಿಲ್ಲ. ಹೊನ್ನಾಳಿಯಿಂದ ಮನೆ ಬಿಟ್ಟ ಸ್ವಲ್ಪ ಹೊತ್ತಿನಲ್ಲೇ ಚಂದ್ರು ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎರಡು ದಿನವಾದರೂ ಮನೆಗೆ ಬರದಿದ್ದರಿಂದ, ಇಡೀ ಕುಟುಂಬ ಆತಂಕಕ್ಕೀಡಾಗಿದೆ.
ಈಗಾಗಲೇ ದಾವಣಗೆರೆ , ಚಿತ್ರದುರ್ಗ, ಶಿವಮೊಗ್ಗ ಸೇರಿ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿದೆ. ಇದುವರೆಗೆ ಚಂದ್ರಶೇಖರ್ ಪತ್ತೆಯಾಗಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಕುಟುಂಬದ ಹಿರಿಯ ಮಗ ನಾಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ಧುಪಡಿಸಿ, ಮಗನ ಹುಡುಕಾಟದಲ್ಲಿ ತೊಡಗಿದ್ದರು. ನ್ಯಾಮತಿ ತಾಲೂಕಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭಗಳಲ್ಲಿ ಕೇವಲ ಒಂದು ಗಂಟೆ ಮಾತ್ರ ಪಾಲ್ಗೊಂಡು, ಮನೆಗೆ ಬಂದವರೆ ಮನೆಯ ಮಗ ಚಂದ್ರಶೇಖರ ಪತ್ತೆ ಕಾರ್ಯದ ಬಗ್ಗೆ ಪೊಲೀಸ್ ಅಧಿಕಾರಿಗಳು, ಎಲ್ಲಾ ಕಡೆ ಹುಡುಕಾಟ ನಡೆಸಿರುವ ತಮ್ಮ ಬೆಂಬಲಿಗರು, ಆತ್ಮೀಯರ ಜೊತೆಗೆ ಮೊಬೈಲ್‌ನಲ್ಲಿ ಮಾಹಿತಿ ಪಡೆಯುತ್ತಿರುವುದು ಕಂಡು ಬಂದಿತು.