ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂ ಎಲ್ ಎ ಟಿಕೆಟು ನೀಡಲು ಕೋಟಿ ಕೋಟಿ ರೂಪಾಯಿ ವಸೂಲಿ ಮಾಡಿದ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಕರಣದ ಕುರಿತಾಗಿ ಸಮಗ್ರ ತನಿಖೆ ನಡೆಯಲಿ. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಮೇಲೆ ಕಠಿಣ ಕ್ರಮ ಜರುಗಿಸ ಬೇಕು. ಪಕ್ಷ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪ್ರಸ್ತುತ ಪ್ರಾಥಮಿಕ ಹಂತದಲ್ಲಿದೆ. ಅದಿನ್ನೂ ಟಿಕೆಟು ಹಂಚಿಕೆಯ ಹಂತಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ವರಿಷ್ಟರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕುಮಾರ ಸ್ವಾಮಿಯವರು ಪ್ರತಿಪಕ್ಷದ ನಾಯಕರಾಗುವ ಸಾಧ್ಯತೆ ಕಡಿಮೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಕ ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಆದರೆ ಸರಕಾರ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಈಗಾಗಲೇ ಬರ ಘೋಷಣೆ ಮಾಡಿ ರೈತರಿಗೆ ಬೆಳೆ ನಷ್ಟವನ್ನು ಪ್ರಕಟಿಸಬೇಕಿತ್ತು. ಆದರೆ ಬರ ಘೋಷಣೆಯನ್ನು ಸರಕಾರ ಮುಂದೂಡುತ್ತಾ ಬಂದಿದೆ. ಕುಂಟು ನೆಪ ಹೇಳುತ್ತಾ ಪರಿಹಾರ ಪ್ರಕಟಿಸುವಲ್ಲಿ ವಿಳಂಬ ನೀತಿ ತೋರಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದರು.
ಅಲ್ಪಾವ, ಮಧ್ಯಮಾವ ಕೃಷಿ ಸಾಲಗಳನ್ನು ರ್ಘ ಸಾಲವಾಗಿ ಪರಿವರ್ತಿಸಬೇಕು. ಕುಡಿಯುವ ನೀರು, ಮೇವಿಗೆ ಸರಿಯಾದ ವ್ಯವಸ್ಥೆ ರೂಪಿಸಬೇಕು. ರೈತರಿಗೆ ಸಾಲವನ್ನು ಸಕಾಲದಲ್ಲಿ ಬಿಡುಗಡೆ ಮಾಡುವ ಮೂಲಕ ನೆರವಿಗೆ ಬರಬೇಕು ಎಂದು ಆಗ್ರಹಿಸಿದ ಮಾಜಿ ಮುಖ್ಯಮಂತ್ರಿಗಳು, ಸರಕಾರ ಬರ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಬಿಜೆಪಿ ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ತಮಿಳ್ನಾಡು ಟ್ರಿಬ್ಯುನಲ್ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚು ಭೂಪ್ರದೇಶದಲ್ಲಿ ಕೃಷಿ ಮಾಡಿದೆ. ಅಲ್ಲಿನ ಸರಕಾರ ಕೇಳಿದಂತೆ ರಾಜ್ಯದ ಸರಕಾರ ನೀರು ಹರಿಸಿತೇ ಹೊರತು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಿಲ್ಲ. ಇನ್ನಾದರೂ ಸರಕಾರ ತಮಿಳ್ನಾಡಿಗೆ ನೀರು ಹರಿಸದಿರಲು ಗಟ್ಟಿ ನಿರ್ಧಾರ ತಳೆದರೆ ಅದನ್ನು ಬೆಂಬಲಿಸುವುದಾಗಿ ಬಸವರಾಜ ಬೊಮ್ಮಾಯಿ ನುಡಿದರು.