ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಅಂದರೆ ಜನರ ನಿತ್ಯದ ಸಂಗಾತಿಯೇ ಆಗಿಬಿಟ್ಟಿದೆ. ಬೆಳಗ್ಗೆ ಎದ್ದು ಮೊದಲು ಫೋನ್ ನೋಡುವುದು, ರಾತ್ರಿ ಮಲಗುವವರೆಗೆ ಅದರಲ್ಲಿಯೇ ಕಾಲ ಕಳೆಯುವುದು ಬಹುತೇಕ ಎಲ್ಲರ ಜೀವನ ಶೈಲಿಯಾಗಿಬಿಟ್ಟಿದೆ. ಆದರೆ ಇಷ್ಟು ಹೆಚ್ಚು ಸಮಯ ಮೊಬೈಲ್‌ನಲ್ಲಿ ಕಳೆಯುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಕೂಡಾ ಫೋನ್ ಚಟಕ್ಕೆ ಒಳಗಾಗಿದ್ದರೆ, ಈ ಸರಳ ಆದರೆ ಪರಿಣಾಮಕಾರಿಯಾದ 6 ಕ್ರಮಗಳನ್ನು ಅನುಸರಿಸಿ.
ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ
ನೋಟಿಫಿಕೇಶನ್ ಗಳಿಂದ ಮೊಬೈಲ್ ಮೇಲಿನ ಕಣ್ಣು ತೆಗೆಯುವುದು ಕಷ್ಟವಾಗುತ್ತದೆ. ಅದನ್ನು ತಪ್ಪಿಸಲು, ಅವಶ್ಯಕವಲ್ಲದ ಎಲ್ಲಾ ಆ್ಯಪ್‌ಗಳ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.
ಹೆಚ್ಚು ಬಳಸುವ ಆಪ್ಲಿಕೇಶನ್‌ಗಳನ್ನು ತೆಗೆದು ಹಾಕಿ
ಯಾವ ಆ್ಯಪ್‌ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದೀರೋ ಅದನ್ನು ಮೊದಲು ಹುಡುಕಿ. ನಂತರ ಅದನ್ನು ಡಿಲೀಟ್ ಮಾಡುವ ಮೂಲಕ, ಆ ಆಪ್ನಿಂದ ದೂರ ಉಳಿಯುವುದು ಸುಲಭವಾಗುತ್ತದೆ.
ಮೊಬೈಲ್ ನೋಡಲು ಸಮಯ ನಿಗದಿ ಮಾಡಿ
ಮೊಬೈಲ್ ಬಳಕೆಗೂ ಸಮಯ ನಿಗದಿಪಡಿಸಬೇಕು. ಉದಾಹರಣೆಗೆ, ಪ್ರತಿ ಎರಡು ಗಂಟೆಗೆ 10 ನಿಮಿಷ ಮಾತ್ರ ಫೋನ್ ನೋಡಿ. ಇದು ಬಳಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೆಲವು ಸಮಯದಲ್ಲಿ ಫೋನ್ ಮುಟ್ಟಬೇಡಿ
ಬೆಳಿಗ್ಗೆ ಎದ್ದ ಕೂಡಲೇ, ಊಟ ಮಾಡುವಾಗ ಮತ್ತು ಮಲಗುವ ಮೊದಲು ಫೋನ್ ನೋಡುವುದು ಬೇಡ. ಈ ಸಮಯಗಳಲ್ಲಿ ಫೋನ್ ಫ್ರೀ ಆಗಿರಲು ಪ್ರಯತ್ನಿಸಿ.
ಫೋನ್ ನಿಮ್ಮಿಂದ ದೂರವಿರಲಿ
ಹೆಚ್ಚು ಸಮಯ ಫೋನ್ ಬಳಕೆಯಾಗದಂತೆ ನೋಡಿಕೊಳ್ಳಲು, ಅದನ್ನು ತಕ್ಷಣ ಕೈಗೆ ಸಿಗದಷ್ಟು ದೂರವಿರಿಸಿಕೊಳ್ಳಿ. ಹೀಗೆ ಮಾಡಿದರೆ ಅದನ್ನು ನೋಡಬೇಕು ಅನ್ನುವ ತಾತ್ಕಾಲಿಕ ಚಟ ಕಡಿಮೆಯಾಗುತ್ತದೆ.
ಹೊಸ ಅಭ್ಯಾಸಗಳನ್ನ ಬೆಳೆಸಿಕೊಳ್ಳಿ
ಫ್ರೀ ಟೈಮ್‌ನಲ್ಲಿ ಫೋನ್ ಹಿಡಿಯುವ ಬದಲು, ಪುಸ್ತಕ ಓದು, ಆಟ, ಡ್ರಾಯಿಂಗ್, ಮೆಡಿಟೇಶನ್ ಅಥವಾ ಸಂಗೀತ ಕೇಳುವಂತಹ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
ಮೊಬೈಲ್ ಚಟದಿಂದ ಹೊರಬರಲು ಎಲ್ಲರಿಗೂ ಸಾಧ್ಯ. ಶಿಸ್ತಿನಿಂದ ಮತ್ತು ಸ್ವಲ್ಪ ಪ್ರಯತ್ನದಿಂದ ನೀವು ದಿನದಿಂದ ದಿನಕ್ಕೆ ಅದರಿಂದ ದೂರವಾಗಬಹುದು. ಈ ದಿನದ ಒಂದು ಭಾಗವನ್ನಾದರೂ ‘ಮೊಬೈಲ್ ಫ್ರೀ’ ಮಾಡಿಕೊಂಡರೆ, ನೀವು ನಿಮ್ಮ ದಿನವನ್ನು ಹೆಚ್ಚು ಸಮಂಜಸವಾಗಿ ಉಪಯೋಗಿಸಬಹುದು.