ಹೊಸದಿಗಂತ ವರದಿ, ಅಂಕೋಲಾ:
ಯುದ್ಧದಂತ ಪರಿಸ್ಥಿತಿ ಎದುರಾದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ರಕ್ಷಣಾ ಕಾರ್ಯಾಚರಣೆ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕಿನ ಬೆಲೇಕೇರಿ ಮೀನುಗಾರಿಕೆ ಬಂದರಿನಲ್ಲಿ ಕರಾವಳಿ ಕಾವಲು ಪಡೆ ಬೆಲೇಕೇರಿ ಇವರ ವತಿಯಿಂದ ಅಣುಕು ಕಾರ್ಯಾಚರಣೆ ನಡೆಸಲಾಯಿತು.
ಪೊಲೀಸ್ ಇಲಾಖೆ ಅಂಕೋಲಾ, ಅಗ್ನಿಶಾಮಕ ದಳ,ಆರೋಗ್ಯ ಇಲಾಖೆ, ಬಂದರು ಇಲಾಖೆ ಹಾಗೂ ಫಿಶಿಂಗ್ ಬೋಟ್ ಯೂನಿಯನ್ ಬೆಲೇಕೇರಿ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುದ್ಧ ಸಂದರ್ಭದಲ್ಲಿ ಸಂಭವಿಸುವ ಅಗ್ನಿ ಅವಘಡಗಳು ಮತ್ತು ಇನ್ನಿತರ ತುರ್ತು ಸಂದರ್ಭದಲ್ಲಿ ಜನರ ಜೀವ ರಕ್ಷಣೆ, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು,ಬೆಂಕಿ ನಿಯಂತ್ರಣ, ಸಾರ್ವಜನಿಕರ ಜವಾಬ್ದಾರಿ ಮೊದಲಾದವುಗಳ ಕುರಿತು ಅಣುಕು ಕಾರ್ಯಾಚರಣೆ ನಡೆಸುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ಕರಾವಳಿ ಕಾವಲು ಪಡೆ ಪೊಲೀಸ್ ನಿರೀಕ್ಷಕ ಮಂಜುನಾಥ್, ಉಪ ನಿರೀಕ್ಷಕಿ ಪ್ರಿಯಾಂಕಾ,ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿ.ಎಸ್.ಐ ಸುನೀಲ ಹುಲ್ಲೋಳ್ಳಿ, ಅಗ್ನಿಶಾಮಕ ದಳ,ಆರೋಗ್ಯ ಇಲಾಖೆ, ಬಂದರು ಇಲಾಖೆ ಸಿಬ್ಬಂದಿಗಳು, ಬೆಲೇಕೇರಿ ಮೀನುಗಾರರ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.