ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನವಾಗಿ , ಶಾಂತಿ ಪುನರ್ ಸ್ಥಾಪಿಸಲು ರಾಜತಾಂತ್ರಿಕತೆ ಹಾಗೂ ಸಂವಾದದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿಂದು ಹೇಳಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷ ಕುರಿತು ಮಾಹಿತಿ ನೀಡಿದ ಅವರು, ಪ್ರಸ್ತುತ ಉದ್ವಿಗ್ನತೆಯನ್ನು ಶಮನಗೊಳಿಸುವ ಹಾಗೂ ಹರ್ಮುಜ್ ಜಲಸಂಧಿಯನ್ನು ತೆರೆಯುವ ವಿಷಯದಲ್ಲಿ , ರಾಜತಾಂತ್ರಿಕ ಸಂವಾದ ಅಗತ್ಯವಿದೆ ಎಂದು ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ, ಮೂರು ವಾರಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿದ್ದು, ಜಗತ್ತಿನಾದ್ಯಂತ ಗಂಭೀರ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಭಾರತಕ್ಕೂ ಈ ಪರಿಸ್ಥಿತಿ , ಅತ್ಯಂತ ಕಳವಳಕಾರಿ ವಿಷಯವಾಗಿದೆ. ಸಂಘರ್ಷದಿಂದಾಗಿ ವ್ಯಾಪಾರ ಮಾರ್ಗಗಳ ಮೇಲೆ ಪರಿಣಾಮ ಬೀರುತ್ತಿದ್ದು, ಪೆಟ್ರೋಲ್, ಡೀಸೆಲ್ ,ಅನಿಲ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ನಿಯಮಿತ ಪೂರೈಕೆಗೆ ಅಡ್ಡಿಯಾಗುತ್ತಿದೆ ಎಂದು ವಿವರಿಸಿದರು.
ಸುಮಾರು 1 ಕೋಟಿಗೂ ಹೆಚ್ಚು ಭಾರತೀಯರು, ಗಲ್ಫ್ ದೇಶಗಳಲ್ಲಿ ನೆಲೆಸಿ, ಉದ್ಯೋಗ ಮಾಡುತ್ತಿದ್ದಾರೆ. ಅವರ ಜೀವನ, ಜೀವನೋಪಾಯದ ಸುರಕ್ಷತೆಯನ್ನು , ಖಚಿತಪಡಿಸಿಕೊಳ್ಳುವುದು ಭಾರತದ ಪ್ರಮುಖ ಕಾಳಜಿಯಾಗಿದೆ. ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆ ಹಡಗುಗಳು, ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದು, ಅನೇಕ ಭಾರತೀಯ ಸಿಬ್ಬಂದಿ ಈ ಹಡಗುಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ ಸಹ ಪಶ್ಚಿಮ ಏಷ್ಯಾ ಪರಿಸ್ಥಿತಿ ಹಾಗೂ ದೇಶದ ನಾಗರಿಕರ ಸುರಕ್ಷತೆಗಾಗಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡಿದ್ದರು. ಪೆಟ್ರೋಲ್, ಡೀಸೆಲ್, ತೈಲ, ಅನಿಲ ಮತ್ತು ರಸಗೊಬ್ಬರಗಳ ಸುಗಮ ಪೂರೈಕೆಯನ್ನು ಸರ್ಕಾರ ಖಚಿತಪಡಿಸುತ್ತದೆ . ಕಳೆದ 11 ವರ್ಷಗಳಲ್ಲಿ ಭಾರತವು 27 ದೇಶಗಳಿಂದ , 41 ದೇಶಗಳಿಗೆ ಇಂಧನ ಆಮದು ವಲಯವನ್ನು ವಿಸ್ತರಿಸಿದೆ. ಇದರಿಂದಾಗಿ ಯಾವುದೇ ಒಂದು ದೇಶದ ಮೇಲಿನ ಅವಲಂಬನೆ ಕಡಿಮೆ ಮಾಡುವುದಾಗಿದೆ ಎಂದು ತಿಳಿಸಿದರು.



