ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ಬಿಜೆಪಿ ಹೊಸ ತಂತ್ರಗಳನ್ನು ಬಳಸುತ್ತಿದೆ. ಸಾಮಾನ್ಯ ರಾಜಕೀಯ ಸಭೆಗಳ ಬದಲು, ಜನರ ಹೃದಯಕ್ಕೆ ಹತ್ತಿರವಾಗಿರುವ ಕ್ರೀಡೆಯ ಮೂಲಕ ಬೆಂಬಲವನ್ನು ಸೆಳೆಯಲು ಪಕ್ಷ ನಿರ್ಧರಿಸಿದೆ. ಇದರ ಅಂಗವಾಗಿ ಬಿಜೆಪಿ “ಮೋದಿ ಕಪ್” ಹೆಸರಿನ ಫುಟ್ಬಾಲ್ ಟೂರ್ನಿಯನ್ನು ಆಯೋಜಿಸಲು ಮುಂದಾಗಿದೆ.
ರಾಜ್ಯದಾದ್ಯಂತ ಫುಟ್ಬಾಲ್‌ಗಿರುವ ಪ್ರಚಲಿತ ಉತ್ಸಾಹವನ್ನು ಗಮನಿಸಿ ಬಿಜೆಪಿ ಇದನ್ನು ಚುನಾವಣಾ ತಂತ್ರದ ಪ್ರಮುಖ ಭಾಗವನ್ನಾಗಿಸಿದೆ. ಪಕ್ಷದ ಮೂಲಗಳ ಪ್ರಕಾರ, ಎಲ್ಲಾ 294 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮೋದಿ ಕಪ್ ನಡೆಯಲಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಕನಿಷ್ಠ ಮೂರುರಿಂದ ನಾಲ್ಕು ಪಂದ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸೆಪ್ಟೆಂಬರ್ ಪ್ರಾರಂಭದಿಂದ ಈ ಕಪ್ ನಡೆಯಲಿದ್ದು, ಅದಕ್ಕಾಗಿ ಜಿಲ್ಲಾ ಯುವ ಮೋರ್ಚಾ ಹಾಗೂ ಸಂಘಟನಾ ನಾಯಕರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗುತ್ತಿದೆ. ವಿಶೇಷ ಜೆರ್ಸಿಗಳನ್ನೂ ಬಿಡುಗಡೆ ಮಾಡುವ ಯೋಜನೆ ಇದೆ.
ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕಳೆದ ತಿಂಗಳಲ್ಲಿ ಎರಡು ಬಾರಿ ಬಂಗಾಳದಲ್ಲಿ ಸಭೆ ನಡೆಸಿದ್ದು, ದುರ್ಗಾ ಪೂಜೆಗೂ ಮುನ್ನ ಮತ್ತೆ ಭೇಟಿ ನೀಡುವ ನಿರೀಕ್ಷೆಯಿದೆ. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿ, ಈ ರೀತಿಯ ಕ್ರೀಡಾ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಹಾಗೂ ನಗರ ಮಟ್ಟದ ಮತದಾರರನ್ನು ಆಕರ್ಷಿಸಲು ಯತ್ನಿಸುತ್ತಿದೆ. ಆದರೆ ಮೈದಾನದಲ್ಲಿ ಪಕ್ಷದ ಧ್ವಜ ಅಥವಾ ಪ್ರಚಾರ ಸಾಮಗ್ರಿಗಳನ್ನು ಬಳಸದೇ, ಕಾರ್ಯಕ್ರಮವನ್ನು ಕೇವಲ ಕ್ರೀಡಾಕೇಂದ್ರಿತವಾಗಿಯೇ ಇಡಲು ತೀರ್ಮಾನಿಸಲಾಗಿದೆ.
ಈ ನಡುವೆ, ತೃಣಮೂಲ ಕಾಂಗ್ರೆಸ್ ಕೂಡ ತನ್ನದೇ ರೀತಿಯ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಿ ಬಂಗಾಳದ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಹೀಗಾಗಿ ಮೋದಿ ಕಪ್ ನೇರವಾಗಿ “ದೀದಿ ಕಪ್”ಗೆ ಪ್ರತಿಸ್ಪರ್ಧಿಯಾಗಿ ಪರಿಣಮಿಸಿರುವಂತಾಗಿದೆ.