ಹೊಸದಿಗಂತ ವರದಿ, ಮೈಸೂರು:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 8 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ನಯಾ ಪೈಸೆ ಭ್ರಷ್ಟಾಚಾರವಿಲ್ಲದಂತಹ ಅತ್ಯಂತ ಶುದ್ಧವಾದ ಆಡಳಿತವನ್ನು ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸೋಮವಾರ ಸಂಜೆ ನಗರದ ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರ ಒಂದು ಪೈಸೆಯೂ ಭ್ರಷ್ಟಾಚಾರ ನಡೆದಂತೆ ಆಡಳಿತ ನಡೆಸಿದೆ. ಇದರಿಂದಾಗಿ ಸರ್ಕಾರದ ವಿರುದ್ಧ ವಿಪಕ್ಷಗಳಿಗೆ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದರು.
ನರೇಂದ್ರ ಮೋದಿ ಅವರು 12 ವರ್ಷಗಳ ಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದರು. ಈಗ ಕಳೆದ 8 ವರ್ಷಗಳಿಂದ ಪ್ರಧಾನಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟು 20 ವರ್ಷಗಳ ಕಾಲ ಸರ್ಕಾರದ ಆಡಳಿತದಲ್ಲಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಡವರ, ರೈತರ,ಮಹಿಳೆಯರ, ಶೋಷಿತರ ಪರವಾದ ಸಮರ್ಥವಾದ ಸರ್ಕಾರವನ್ನು ನೀಡುತ್ತಿದ್ದಾರೆ. ರಾಜ್ಯಕ್ಕೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ. 2022ರಲ್ಲಿ ದೇಶಕ್ಕೆ ಸ್ವಾತಂತ್ರö್ಯ ಬಂದು 75 ವರ್ಷಗಳಾದ ಸಂಭ್ರಮ ಬರುತ್ತಿದೆ. ಆದರೆ ಮೋದಿ ಅವರು ಇನ್ನೂ 25 ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂಬುದರ ಚಿಂತೆಯನ್ನು ನೀಡಿದ್ದಾರೆ. ಬಡವರಿಗೆ ಬಹಳ ಅನುಕೂಲವಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ನೀಡಿದ್ದಾರೆ. ಬೆಂಗಳೂರು-ಮೈಸೂರು ನಡುವೆ ದಶಪಥ ರಸ್ತೆ ನಿರ್ಮಾಣ ಮಾಡಿದ್ದಾರೆ. ಇಡೀ ವಿಶ್ವಕ್ಕೆ ಭಾರತದ ಯೋಗವನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಆ ಮೂಲಕ ಇಡೀವಿಶ್ವಕ್ಕೆ ಆರೋಗ್ಯಕರ ಜೀವನ ಶೈಲಿಯನ್ನು ನೀಡಿದ್ದಾರೆ. ದಣಿವಿಲ್ಲದ ನಾಯಕರಂತೆ ದೇಶದ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.