ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ದೇಶದಾದ್ಯಂತ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು (ಕೆವಿಗಳು) ತೆರೆಯಲು ನಿರ್ಧಾರ ಮಾಡಲಾಗಿದೆ. ಇದರಲ್ಲಿ ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕದ ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳು ಯಾದಗಿರಿ, ಚಿತ್ರದುರ್ಗ ಹಾಗೂ ರಾಯಚೂರು ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ. ಯಾದಗಿರಿ ಜಿಲ್ಲೆಯ ಮುದ್ನಾಳ್ ಗ್ರಾಮದಲ್ಲಿ, ಚಿತ್ರದುರ್ಗದ ಕುಂಚಿಗನಾಳ್ ಗ್ರಾಮ ಹಾಗೂ ರಾಯಚೂರಿನ ಸಿಂಧನೂರು ತಾಲೂಕಿನ ಎಳರಗಿ ಗ್ರಾಮದಲ್ಲಿ ಕೇಂದ್ರೀಯ ವಿದ್ಯಾಲಯಗಳು ನಿರ್ಮಾಣವಾಗಲಿದೆ. ಅದರೊಂದಿಗೆ ಕರ್ನಾಟಕ ಕ್ಕೆ ಒಂದು ಹೊಸ ನವೋದಯ ವಿದ್ಯಾಲಯ ಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬಳ್ಳಾರಿಯಲ್ಲಿ ನವೋದಯ ವಿದ್ಯಾಲಯ ನಿರ್ಮಾಣವಾಗಲಿದೆ.
ಕೇಂದ್ರ ಸಂಪುಟ 85 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು (ಕೆವಿಗಳು) ತೆರೆಯಲು ಮತ್ತು ಅಸ್ತಿತ್ವದಲ್ಲಿರುವ ಒಂದು ಕೆವಿ ವಿಸ್ತರಣೆಗೆ ಅನುಮೋದನೆ ನೀಡಿದೆ. ಹೊಸ ಕೆವಿಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಒಂದು ಕೆವಿ ವಿಸ್ತರಣೆಗೆ ಒಟ್ಟು 5,872.08 ಕೋಟಿ ಹಣ ಮೀಸಲಿಡುವುದಾಗಿ ತಿಳಿಸಿದೆ.
ದೇಶದಾದ್ಯಂತ 28 ಹೊಸ ನವೋದಯ ವಿದ್ಯಾಲಯಗಳನ್ನು (NVs) ಸ್ಥಾಪಿಸಲು ಕ್ಯಾಬಿನೆಟ್ ಅನುಮೋದಿಸಿದೆ. ನವೋದಯಗಳ ಸ್ಥಾಪನೆಗೆ ಒಟ್ಟು ಅಂದಾಜು 2359 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಿದೆ.