ಬಾಂಗ್ಲಾದೇಶ ಸರ್ಕಾರಕ್ಕೆ ಶಾಕ್ ಕೊಟ್ಟ ಮೋದಿ ಸರಕಾರ: ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯ ರದ್ದುಗೊಳಿಸಿದ ಭಾರತ!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ಮೂಗು ತುರಿಸುತ್ತಿರುವ ಬಾಂಗ್ಲಾದೇಶಕ್ಕೆ ಇದೀಗ ಭಾರತ ತಕ್ಕ ಉತ್ತರ ನೀಡಿದೆ. ಬಾಂಗ್ಲಾದೇಶದಿಂದ ರಫ್ತು ಸರಕುಗಳಿಗೆ ಟ್ರಾನ್ಸ್‌ಶಿಪ್‌ಮೆಂಟ್ ಸೌಲಭ್ಯಗಳನ್ನು ಭಾರತ ರದ್ದುಗೊಳಿಸಿದೆ.

ಬಾಂಗ್ಲಾದೇಶದ ಮಧ್ಯಂತರ ನಾಯಕ ಮುಹಮ್ಮದ್ ಯೂನಸ್ ಭಾರತದ ಈಶಾನ್ಯ ರಾಜ್ಯಗಳಿಗೆ ಚೀನಾದ ಆರ್ಥಿಕ ಪ್ರವೇಶವನ್ನು ಪ್ರತಿಪಾದಿಸಿದ ಕೆಲವು ದಿನಗಳ ನಂತರ, ಭಾರತವು ತನ್ನ ಪ್ರದೇಶದ ಮೂಲಕ ಬಾಂಗ್ಲಾದೇಶದ ರಫ್ತಿಗೆ ಪ್ರಮುಖ ಸಾರಿಗೆ ಸೌಲಭ್ಯವನ್ನು ರದ್ದುಗೊಳಿಸಿದೆ.

ಭಾರತ ಬಾಂಗ್ಲಾದೇಶದ ರಫ್ತು ಸರಕುಗಳನ್ನು ಭಾರತೀಯ ಭೂ ಕಸ್ಟಮ್ಸ್ ಸ್ಟೇಷನ್‌ಗಳು (LCS ಗಳು), ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಗಳಿಗೆ ಸಾಗಿಸಲು ಅವಕಾಶ ಮಾಡಿಕೊಟ್ಟಿತ್ತು. ಇದೀಗ ಭಾರತ ಆ ಸೌಲಭ್ಯವನ್ನು ರದ್ದುಪಡಿಸುವ ಮೂಲಕ ಬಾಂಗ್ಲಾದೇಶ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದೆ.

ಜೂನ್ 2020ರಲ್ಲಿ ಪರಿಚಯಿಸಲಾದ ಈ ಸೌಲಭ್ಯವು ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್‌ನಂತಹ ರಾಷ್ಟ್ರಗಳಿಗೆ ಭಾರತದ ಮೂಲಕ ಬಾಂಗ್ಲಾದೇಶದ ಸರಕುಗಳ ರಫ್ತಿಗೆ ಸುಗಮ ಮಾರ್ಗವನ್ನು ಒದಗಿಸಿತ್ತು. ಇದೀಗ ಏಪ್ರಿಲ್ 8ರಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಹೊರಡಿಸಿದ ಸುತ್ತೋಲೆಯ ಮೂಲಕ ಈ ನಿರ್ಧಾರವನ್ನು ಅಧಿಕೃತಗೊಳಿಸಲಾಗಿದೆ.

‘ಬಾಂಗ್ಲಾದೇಶದಿಂದ ಮೂರನೇ ದೇಶಗಳಿಗೆ ರಫ್ತು ಸರಕುಗಳನ್ನು ಭೂ ಕಸ್ಟಮ್ಸ್ ಸ್ಟೇಷನ್‌ಗಳು (LCS ಗಳು) ಮೂಲಕ ಬಂದರುಗಳು ಅಥವಾ ವಿಮಾನ ನಿಲ್ದಾಣಗಳಿಗೆ ಕಂಟೇನರ್‌ಗಳು ಅಥವಾ ಮುಚ್ಚಿದ ಟ್ರಕ್‌ಗಳಲ್ಲಿ ಸಾಗಿಸುವುದನ್ನು ರದ್ದುಗೊಳಿಸಲಾಗಿದೆ’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ, ಇನ್ನುಮುಂದೆ ಬಾಂಗ್ಲಾದೇಶದ ಸರಕುಗಳು ಭಾರತದ ಭೂಪ್ರದೇಶ ಅಥವಾ ಸಮುದ್ರಮಾರ್ಗವಾಗಿ ಬೇರೆ ದೇಶಗಳಿಗೆ ರಫ್ತಾಗುವಂತಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!