ಹೊಸದಿಗಂತ, ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ಜನತೆ ಬಹುದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ ಶಿವಮೊಗ್ಗ 10 ಕೆವಿ ಎಫ್.ಎಂ ಟ್ರಾನ್ಸ್ ಮೀಟರ್ಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಎಫ್ಎಂ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಸಹ್ಯಾದ್ರಿ ಕಾಲೇಜು ಮುಂಭಾಗದ ದೂರದರ್ಶನ ಕೇಂದ್ರದಲ್ಲಿ ಶಿಲಾನ್ಯಾಸ ನೆರವೇರಲಿದೆ. ಚೆನ್ನೈನಿಂದ ಸಂಜೆ 6ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗದ 10 ಕೆವಿ ಎಫ್.ಎಂ. ಟ್ರಾನ್ಸ್ ಮೀಟರ್ಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಎಫ್ಎಂ ಕೇಂದ್ರದ ಅಗತ್ಯ ಮನಗಂಡು ಸಂಸದ ರಾಘವೇಂದ್ರ ಕಳೆದ 08 ವರ್ಷಗಳ ಹಿಂದೆಯೇ ಇದಕ್ಕಾಗಿ ಪ್ರಯತ್ನ ಮಾಡಿದ್ದರು. ಆಗ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ 1 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್ಎಂ ಟ್ರಾನ್ಸ್ಮೀಟರ್ ಮಂಜೂರಾಗಿತ್ತು. ಇದು ಕೇವಲ 20 ಕಿಮೀ ದೂರ ಮಾತ್ರ ಪ್ರಸಾರ ಆಗುತ್ತಿತ್ತು.
ಈಗ 06 ತಿಂಗಳ ಹಿಂದೆ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಈಗ 09 ಕೋಟಿ ರೂ. ಬಿಡಗಡೆಯೂ ಆಗಿದೆ. ಜನರ ನಿರೀಕ್ಷೆ ಈಡೇರುತ್ತಿದೆ ಎಂದು ಸಂಸದ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.