ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಎಂದಿಗೂ ಯುದ್ಧವನ್ನು ಮೊದಲ ಆಯ್ಕೆಯಾಗಿ ಆರಿಸಿಕೊಳ್ಳುವುದಿಲ್ಲ. ಅಂದು ರಾಮ-ರಾವಣರ ಯುದ್ಧ ಹಾಗೂ ಕುರುಕ್ಷೇತ್ರ ನಿಲ್ಲಿಸಲು ಕೊನೆಯ ಕ್ಷಣದವರೆಗೂ ಪ್ರಯತ್ನಗಳು ನಡೆದವು. ಈಗಲೂ ಕೂಡಾ ನಾವು ವಿಶ್ವಶಾಂತಿಗಾಗಿ ಒಟ್ಟಾಗಿ ಶ್ರಮಿಸುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸೋಮವಾರ ಪ್ರಧಾನಿ ಮೋದಿ ಕಾರ್ಗಿಲ್‌ಗೆ ತೆರಳಿ ಯೋಧರೊಂದಿಗೆ ದೀಪಾವಳಿ ಆಚರಿಸಿ ಸೈನಿಕರಿಗೆ ಸಿಹಿ ಹಂಚಿದರು. ಸ್ವಲ್ಪ ಹೊತ್ತು ಸೈನಿಕರೊಂದಿಗೆ ಮಾತುಕತೆ ನಡೆಸಿ, ನಂತರ ಯೋಧರ ಸೇವೆಯನ್ನು ಪ್ರಧಾನಿ ಸ್ಮರಿಸಿದರು.
ದೇಶ ರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿರುವ ಸೈನಿಕರ ಜೊತೆಯಲ್ಲಿ ಇರುವುದಕ್ಕಿಂತ ದೊಡ್ಡ ದೀಪಾವಳಿ ಆಚರಣೆ ಮತ್ತೊಂದಿಲ್ಲ. ಸೈನಿಕರೇ ನಮ್ಮ ಕುಟುಂಬ. ಅದಕ್ಕಾಗಿಯೇ ಇಲ್ಲಿ ಹಬ್ಬ ಆಚರಿಸಲು ಬಂದಿದ್ದೇನೆ. ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಕ್ಕೆ ಸಂತೋಷವಾಗುತ್ತಿದೆ ಎಂದರು. ಸೈನಿಕರು ದೇಶದ ರಕ್ಷಣಾ ಸ್ತಂಭಗಳು ನೀವು ನಮ್ಮ ಗಡಿಯನ್ನು ರಕ್ಷಿಸುತ್ತಿರುವುದರಿಂದಲೇ ದೇಶದ ಎಲ್ಲಾ ಜನರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಸೈನಿಕರಂತೆ ನಾವೂ ಕೂಡ ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ನಕ್ಸಲಿಸಂನಂತಹ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದೇವೆ. ವಿಶ್ವ ವೇದಿಕೆಯಲ್ಲಿ ಭಾರತದ ಶಕ್ತಿ ಹೆಚ್ಚಿದ್ದು, ಆರ್ಥಿಕವಾಗಿಯೂ ಐದನೇ ಶಕ್ತಿಯಾಗಿದ್ದೇವೆ ಎಂದರು. ದೀಪಾವಳಿಯು ದುಷ್ಟತನವನ್ನು ಕೊನೆಗಾಣಿಸುವ ಹಬ್ಬವಾಗಿದೆ. ಕಾರ್ಗಿಲ್ ಅದನ್ನು ಸಾಧ್ಯವಾಗಿಸಿತಲ್ಲದೆ, ಕಾರ್ಗಿಲ್‌ನಲ್ಲಿ ನಮ್ಮ ಸೇನೆ ಭಯೋತ್ಪಾದನೆಯನ್ನು ಹತ್ತಿಕ್ಕಿತು ಎಂದು ಮೋದಿ ಹೇಳಿದರು.