ರಾಹುಲ್ ಗಾಂಧಿ ‘ಬಾಲಕ ಬುದ್ಧಿಯವನು’‌ ಎಂದ ಮೋದಿ: ಸಂಸತ್ ನಲ್ಲಿ ಸೈಕಲ್‌ ಕತೆ ಹೇಳಿದ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಕಾಂಗ್ರೆಸ್‌, ರಾಹುಲ್‌ ಗಾಂಧಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಅವರು, ಸೈಕಲ್‌ ಕಲಿಯಲು ಹೋದ ಬಾಲಕನು ಬಿದ್ದಾಗ ಆತನಿಗೆ ಬೇರೊಬ್ಬರು ಸಮಾಧಾನ ಮಾಡಿದ ರೀತಿಯನ್ನು ರಾಹುಲ್‌ ಗಾಂಧಿ ಅವರ ಪಕ್ಷದ ಸೋಲಿಗೆ ಹೋಲಿಸಿ ಕುಟುಕಿದರು.

ನಾನು ನಿಮಗೆ ಸೈಕಲ್‌ ಕಲಿಯುವ ಬಾಲಕನ ಕತೆ ಹೇಳುತ್ತೇನೆ ಎಂದು ಮಾತು ಶುರು ಮಾಡಿದ ಮೋದಿ, ಬಾಲಕನೊಬ್ಬನು ಸೈಕಲ್‌ ಕಲಿಯಲು ರಸ್ತೆ ಇಳಿಯುತ್ತಾನೆ. ಆತ ಸೈಕಲ್‌ ತುಳಿಯುತ್ತಲೇ ಸ್ವಲ್ಪ ದೂರ ಮುಂದೆ ಹೋಗಿ ಬೀಳುತ್ತಾನೆ. ಸೈಕಲ್‌ನಿಂದ ಬಿದ್ದ ಆತನು ಜೋರಾಗಿ ಅಳಲು ಮುಂದಾಗುತ್ತಾನೆ. ಆಗ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ಬಾಲಕನಿಗೆ ಹಲವು ಸುಳ್ಳುಗಳನ್ನು ಹೇಳುವ ಮೂಲಕ ಆತನನ್ನು ಸಮಾಧಾನಪಡಿಸುತ್ತಾರೆ. ಆಗ ಬಾಲಕನು ಸುಳ್ಳುಗಳನ್ನು ನಂಬಿ ಸುಮ್ಮನಾಗುತ್ತಾನೆ ಎಂಬುದಾಗಿ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಛೇಡಿಸಿದರು.

ಬಾಲಕನ 99 ಅಂಕದ ಕತೆ
ಮತ್ತೊಬ್ಬ ಬಾಲಕನ ಕತೆ ಹೇಳಿದ ಮೋದಿ, ಬಾಲಕನೊಬ್ಬ ಪರೀಕ್ಷೆಯಲ್ಲಿ 99 ಅಂಕ ಪಡೆದಿರುತ್ತಾನೆ. ನಾನು 99 ಅಂಕ ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳುತ್ತಾನೆ. ಇದನ್ನು ಕೇಳಿದ ಜನ ಖುಷಿಪಡುತ್ತಾರೆ. ಆದರೆ, ಟೀಚರ್‌ ಬಂದು ನೀನೇಕೆ ಸ್ವೀಟ್‌ ಹಂಚುತ್ತಿದ್ದೀಯಾ? ಎಂದು ಕೇಳುತ್ತಾರೆ. ಏಕೆಂದರೆ, ಆ ಬಾಲಕನು 100ಕ್ಕೆ 99 ಅಂಕ ಪಡೆದಿರುವುದಿಲ್ಲ. ಆತನು 543 ಅಂಕಗಳ ಪೈಕಿ 99 ಅಂಕ ಪಡೆದಿರುತ್ತಾನೆ. ಈಗ ಹೇಳಿ ಯಾರ ವೈಫಲ್ಯವು ಇದಕ್ಕೆ ಮ್ಯಾಚ್‌ ಆಗುತ್ತದೆ, ಎಂದು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಅವರ ಸ್ಥಿತಿಯನ್ನು ಪರೋಕ್ಷವಾಗಿ ಹೇಳಿದರು.

ಇನ್ನೊಬ್ಬ ಬಾಲಕನಿಗೆ ಹೊಡೆದ ಕತೆ
ಒಬ್ಬ ಬಾಲಕ ಶಾಲೆಯಿಂದ ಮನೆಗೆ ಬಂದು ಜೋರಾಗಿ ಅಳತೊಡಗಿದೆ. ಈತನ ಸ್ಥಿತಿ ನೋಡಿ ಅಮ್ಮನೂ ಹೆದರಿದಳು. ಏಕೆ ಎಂದು ಅಮ್ಮ ಕೇಳಿದಾಗ ಬಾಲಕನು, “ಅಮ್ಮ ನನಗೆ ಶಾಲೆಯಲ್ಲಿ ಹೊಡೆದರು. ನನಗೆ ತುಂಬ ಥಳಿಸಿದರು. ನನಗೆ ಹೊಡೆದರು, ನನಗೆ ಹೊಡೆದರು” ಎಂದು ಇನ್ನಷ್ಟು ಅಳತೊಡಗಿದ. ಆಗ ಅಪ್ಪ,ಏನಾಯಿತು ಎಂದು ಕೇಳಿದ. ಬೇರೊಬ್ಬ ಬಾಲಕನ ತಾಯಿಗೆ ಬೈದಿರುವ ಕುರಿತು, ಬೇರೊಬ್ಬ ಬಾಲಕನನ್ನು ಕಳ್ಳ ಎಂದು ಕರೆದಿರುವುದು, ಬೇರೊಬ್ಬನ ಟಿಫಿನ್‌ ಬಾಕ್ಸ್‌ ಕದ್ದು, ಊಟ ಮಾಡಿರುವುದು ಸೇರಿ ಹಲವು ವಿಷಯಗಳನ್ನು ಆ ಬಾಲಕನು ತಂದೆ-ತಾಯಿಗೆ ಹೇಳಲೇ ಇಲ್ಲ ಎಂದು ರಾಹುಲ್‌ ಗಾಂಧಿ ಅವರಿಗೆ ಮೋದಿ ತಿರುಗೇಟು ನೀಡಿದರು.

ಹೀಗಾಗಿನಿನ್ನೆ ಸಂಸತ್ತಿನಲ್ಲಿ ಒಬ್ಬರು ನನಗೆ ಅವರು ಹೊಡೆದರು, ಇವರು ಹೊಡೆದರು ಎಂಬುದಾಗಿ ಬಾಲಕ ಬುದ್ಧಿಯ ವ್ಯಕ್ತಿಯೊಬ್ಬರು ಕಿರುಚಾಡಿದರು. ಇದು ಜನರ ಸಿಂಪತಿ ಗಳಿಸಲು ಮಾಡಿರುವ ತಂತ್ರವಾಗಿದೆಯೇ ಹೊರತು, ಇದರಲ್ಲಿ ಯಾವುದೇ ಕಾಳಜಿ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷವು ಈಗ ಬೇರೆ ಪಕ್ಷಗಳ ಬೆಂಬಲದ ಆಧಾರದ ಮೇಲೆ ನಿಂತಿದೆ. ಏಕಾಂಗಿಯಾಗಿ ನಿಂತ ಕಡೆಗಳೆಲ್ಲ ಇವರು ಹೀನಾಯವಾಗಿ ಸೋತಿದ್ದಾರೆ. 13 ರಾಜ್ಯಗಳಲ್ಲಿ ಕಾಂಗ್ರೆಸ್‌ ಜೀರೊ ಆಗಿದೆ. ಆದರೂ ಇವರು ಹೀರೊ ಆಗಿದ್ದಾರೆ. ದೇಶದ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್ ಮೂರನೇ ಬಾರಿ ಹೀನಾಯವಾಗಿ ಸೋತಿದೆ. ಸಹಯೋಗಿ ಪಕ್ಷಗಳ ಹೆಗಲ ಕೂರಿಸಿಕೊಂಡು ಕಾಂಗ್ರೆಸ್ ಮೀಸೆ ತಿರುವುತ್ತಿದೆ. ಬೇರೆ ಪಕ್ಷಗಳ ಚುಂಗು ಹಿಡಿದುಕೊಂಡು ಕಾಂಗ್ರೆಸ್ ಕುಪ್ಪಳಿಸುತ್ತಿದೆ. ಪರಜೀವಿ ಪಕ್ಷವಾಗಿರುವ ಇದು ಈಗ ಅದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!