ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಜೂನ್ 9 (ಇಂದು) ಭಾನುವಾರದಂದು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಭವನದ ಫೋರ್ಕೋರ್ಟ್‌ನಲ್ಲಿ ಸಂಜೆ 7:15 ಕ್ಕೆ ಪ್ರಾರಂಭವಾಗುವ ಮೆಗಾ ಈವೆಂಟ್ ಅನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಸಂಚಾರ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಕೆಲವು ರಸ್ತೆಗಳು ಮತ್ತು ತಿರುವುಗಳನ್ನು ಮುಚ್ಚುವ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
“ಸುಮಾರು 1,100 ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಸೂಚನೆಗಳ ಬಗ್ಗೆ ಅವರಿಗೆ ವಿವರಿಸಲಾಗಿದೆ. ಎಲ್ಲಾ ರಿಹರ್ಸಲ್ ಮಾಡಿದ್ದೇವೆ. ಟ್ರಾಫಿಕ್ ಸಂಚಾರಕ್ಕಾಗಿ ಸಾರ್ವಜನಿಕರಿಗೆ ಸಲಹೆಯನ್ನು ನೀಡಲಾಗಿದೆ,” ಎಂದು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ಹೇಳಿದರು, ವಿದೇಶಿ ಪ್ರತಿನಿಧಿಗಳು ಮತ್ತು ರಾಜ್ಯಗಳ ಮುಖ್ಯಸ್ಥರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ಸಂಚಾರ ಪೊಲೀಸರ ಪ್ರಕಾರ, ಭಾನುವಾರ ಮಧ್ಯಾಹ್ನ 2 ರಿಂದ ರಾತ್ರಿ 11 ರವರೆಗೆ ಹಲವಾರು ರಸ್ತೆಗಳನ್ನು ಮುಚ್ಚಲಾಗುತ್ತದೆ. ಅವುಗಳೆಂದರೆ: ಸಂಸದ್ ಮಾರ್ಗ, ನಾರ್ತ್ ಅವೆನ್ಯೂ ರಸ್ತೆ, ಸೌತ್ ಅವೆನ್ಯೂ ರಸ್ತೆ, ಕುಶಾಕ್ ರಸ್ತೆ, ರಾಜಾಜಿ ಮಾರ್ಗ, ಕೃಷ್ಣ ಮೆನನ್ ಮಾರ್ಗ, ಟಾಲ್ಕಟೋರಾ ರಸ್ತೆ ಮತ್ತು ಪಿಟಿ ಪಂತ್ ಮಾರ್ಗ, ಇಮ್ತಿಯಾಜ್ ಖಾನ್ ಮಾರ್ಗ್, ರಕಬ್ ಗಂಜ್ ರಸ್ತೆ, ರಫಿ ಅಹ್ಮದ್ ಕಿದ್ವಾಯಿ ಮಾರ್ಗ, ಪಂಡಿತ್ ಪಂತ್ ಮಾರ್ಗ ಮತ್ತು ಟಾಲ್ಕಟೋರಾ ರಸ್ತೆಯ ಸಮೀಪದಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಲು ಅನುಮತಿಸಲಾಗುವುದಿಲ್ಲ, ಎಲ್ಲಾ ಡಿಟಿಸಿ ಬಸ್‌ಗಳು ರಾಷ್ಟ್ರಪತಿ ಭವನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸುವುದಿಲ್ಲ. ಎಂದು ಸೂಚನೆ ನೀಡಿದ್ದಾರೆ.