ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾದ ವ್ಲಾಡಿಮಿರ್ ಪುಟಿನ್ (Vladimir Putin) ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದು, ಇದರ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಅವರೊಂದಿಗೆ ಮಾತನಾಡಿದ್ದಾರೆ.
ಝೆಲೆನ್ಸ್ಕಿಮತ್ತು ಮೋದಿ ವಿವಿಧ ಕ್ಷೇತ್ರಗಳಲ್ಲಿ ಭಾರತ-ಉಕ್ರೇನ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ರಷ್ಯಾ-ಉಕ್ರೇನ್ ರಾಷ್ಟ್ರಗಳ ನಡುವಿನ ಎಲ್ಲಾ ಸಮಸ್ಯೆಗಳ ಆರಂಭಿಕ ಮತ್ತು ಶಾಂತಿಯುತ ಪರಿಹಾರಕ್ಕಾಗಿ ಭಾರತವು ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಶಾಂತಿಯುತ ಪರಿಹಾರವನ್ನು ಬೆಂಬಲಿಸಲು ಭಾರತವು ತನ್ನ ವಿಧಾನದಲ್ಲಿ ಎಲ್ಲವನ್ನೂ ಮಾಡುವುದನ್ನು ಮುಂದುವರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಉಕ್ರೇನ್ ಜನರಿಗೆ ಭಾರತದ ನಿರಂತರ ಮಾನವೀಯ ಸಹಾಯವನ್ನು ಅಧ್ಯಕ್ಷ ಝೆಲೆನ್ಸ್ಕಿ ಅವರು ಶ್ಲಾಘಿಸಿದ್ದು, ಉಭಯ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡರು. ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆ ವೇಳೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ‘ಸಂವಾದ ಮತ್ತು ರಾಜತಾಂತ್ರಿಕತೆ’ಗೆ ಪ್ರಧಾನಿ ಮೋದಿ ಕರೆ ನೀಡಿದರು.
“ಭಾರತ-ಉಕ್ರೇನ್ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಉತ್ತಮ ಸಂವಾದ ನಡೆಸಿದೆ. ಶಾಂತಿಗಾಗಿ ಎಲ್ಲಾ ಪ್ರಯತ್ನಗಳಿಗೆ ಮತ್ತು ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯವನ್ನು ತರಲು ಭಾರತದ ನಿರಂತರ ಬೆಂಬಲವನ್ನು ತಿಳಿಸಿರುವೆ. ಭಾರತವು ನಮ್ಮ ಜನಕೇಂದ್ರಿತ ವಿಧಾನದಿಂದ ಮಾರ್ಗದರ್ಶಿಸಲ್ಪಟ್ಟ ಮಾನವೀಯ ನೆರವು ನೀಡುವುದನ್ನು ಮುಂದುವರಿಸುತ್ತದೆ.ಎಂದು ಪ್ರಧಾನ ಮಂತ್ರಿ ಸಾಮಾಜಿಕ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ.