ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ದ್ವಿಪಕ್ಷೀಯ ಸಭೆ ನಡೆಸಿದರು.
ಈ ವೇಳೆ ಉಭಯ ನಾಯಕರು ಉಕ್ರೇನ್ ಹಾಗೂ ರಷ್ಯಾದ ನಡುವಿನ ಸಂಘರ್ಷ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು.
ಉಕ್ರೇನ್ ಬಿಕ್ಕಟ್ಟಿನ ಕುರಿತು ಮಾತನಾಡಿದ ಪ್ರಧಾನಿ ಮೋದಿ, ‘ನಾವು ಉಕ್ರೇನ್ ಬಗ್ಗೆ ಚರ್ಚಿಸುತ್ತಿದ್ದೇವೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಶಾಂತಿಯನ್ನು ಸಾಧಿಸಲು ಮುಂದುವರಿಯಬೇಕೆಂದು ಆಶಿಸುತ್ತೇವೆ. ಈ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ಭಾರತ ಬಯಸುತ್ತದೆ. ಉಕ್ರೇನ್ ಮತ್ತು ರಷ್ಯಾದ ನಡುವೆ ಶಾಶ್ವತ ಶಾಂತಿಯನ್ನು ಕಂಡುಕೊಳ್ಳುವ ಮಾರ್ಗವು ಇಡೀ ಜಗತ್ತಿನ ಮಾನವೀಯತೆಯ ಕರೆಯಾಗಿದೆ’ ಎಂದು ಹೇಳಿದ್ದಾರೆ.
ಈ ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಬೇಕು ಮತ್ತು ಶಾಶ್ವತ ಶಾಂತಿಗೆ ಮಾರ್ಗವನ್ನು ತ್ವರಿತವಾಗಿ ಕಂಡುಕೊಳ್ಳಬೇಕು. ಶಾಂತಿಯ ದಿಕ್ಕಿನಲ್ಲಿ ಇತ್ತೀಚೆಗೆ ರಷ್ಯಾ ಹಾಗೂ ಉಕ್ರೇನ್ ಮಾಡಿದ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಪ್ರಧಾನಿ ಮೋದಿ ಪುಟಿನ್ಗೆ ಸಲಹೆ ನೀಡಿದ್ದಾರೆ.
‘ಪುಟಿನ್ ಅವರೊಂದಿಗಿನ ಭೇಟಿ ಯಾವಾಗಲೂ ಸ್ಮರಣೀಯ. ಡಿಸೆಂಬರ್‌ನಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ನಾವು ಕಾಯುತ್ತಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಮುಂಬರುವ 23ನೇ ಭಾರತ-ರಷ್ಯಾ ಶೃಂಗಸಭೆಗೆ ಪ್ರಧಾನಿ ಅಧ್ಯಕ್ಷ ಪುಟಿನ್ ಅವರಿಗೆ ಆತ್ಮೀಯ ಆಹ್ವಾನವನ್ನು ನೀಡಿದರು. ‘140 ಕೋಟಿ ಭಾರತೀಯರು ನಿಮಗಾಗಿ ಕಾತರದಿಂದ ಕಾಯುತ್ತಿದ್ದಾರೆ’ ಎಂದು ಮೋದಿ ಹೇಳಿದರು.
ಪುಟಿನ್ ಹೇಳಿದ್ದೇನು?:
‘ನಮ್ಮ ಸಂಬಂಧವು ತತ್ವಗಳನ್ನು ಆಧರಿಸಿದೆ ಎಂದು ನಾವು ಹೇಳಬಹುದು. ನಮ್ಮ ನಡುವೆ ಬಹುಮುಖಿ ಸಹಕಾರವಿದೆ. ಇಂದಿನ ಸಭೆಯು ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತೊಂದು ಉತ್ತಮ ಅವಕಾಶವಾಗಿದೆ. ರಷ್ಯಾ ಮತ್ತು ಭಾರತದ ನಡುವೆ ಅತ್ಯಂತ ವಿಶ್ವಾಸಾರ್ಹ ಸಂಬಂಧವಿದೆ, ಅದು ರಾಜಕೀಯವನ್ನು ಆಧರಿಸಿಲ್ಲ’ ಎಂದು ಪುಟಿನ್ ಹೇಳಿದ್ದಾರೆ.