ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ 2023 ರಲ್ಲಿ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ತೋರಿದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹಲವು ವಿಚಾರಗಳನ್ನು ಮೆಲುಕುಹಾಕಿದ್ದಾರೆ .
ಶಮಿ ಒಟ್ಟು 24 ರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದರು. ತಮ್ಮ ಅಮೋಘ ಪ್ರದರ್ಶನಕ್ಕಾಗಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಕೂಡ ಪಡೆದರು. ಇವೆಲ್ಲದರ ಹೊರತಾಗಿಯೂ, ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು.
ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಇದರ ವಿಡಿಯೋ ವ್ಯಾಪಕವಾಗಿ ಶೇರ್ ಆಗಿತ್ತು. ಡ್ರೆಸ್ಸಿಂಗ್ ರೂಮ್‌ನಲ್ಲಿ ಮೋದಿ ಅವರು ಶಮಿಯನ್ನು ಅಪ್ಪಿಕೊಂಡು ಅವರ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡಿತ್ತು.
ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಶಮಿ. ಮೋದಿ ಡ್ರೆಸ್ಸಿಂಗ್ ರೂಮ್ಗೆ ಬಂದಾಗ ಏನೆಲ್ಲ ಆಯಿತು ಎಂಬುದನ್ನು ವಿವರಿಸಿದ್ದಾರೆ.
“ನಾವು ಸೋತ ನಂತರ ಆಘಾತದಲ್ಲಿದ್ದೆವು ಮತ್ತು ಹತಾಶರಾಗಿ ಕುಳಿತಿದ್ದೇವೆ. ಕೇವಲ ಒಂದು ಪಂದ್ಯದಿಂದಾಗಿ ನಮ್ಮ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಅದು ನಮ್ಮ ಕೆಟ್ಟ ದಿನ. ನಾವು ನಿರಾಶೆಗೊಂಡಿದ್ದೆವು. ಆಗ ಅಲ್ಲಿಗೆ ದಿಢೀರ್ ಆಗಿ ಪ್ರಧಾನಿ ಮೋದಿ ಆಗಮಿಸಿದರು. ಮೋದಿಜಿ ಅಲ್ಲಿಗೆ ಬರುತ್ತಿದ್ದಾರೆ ಎಂದು ನಮಗೆ ಯಾರೂ ತಿಳಿಸಿರಲಿಲ್ಲ. ಇದ್ದಕ್ಕಿದ್ದಂತೆ ಅವರು ಡ್ರೆಸ್ಸಿಂಗ್ ರೂಮ್ಗೆ ಬಂದರು. ನಾವು ಆಹಾರ ಸೇವಿಸುವ ಅಥವಾ ಪರಸ್ಪರ ಮಾತನಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೆ ಅವರು ಬಂದಾಗ ನಮಗೆ ಅದು ದೊಡ್ಡ ಆಶ್ಚರ್ಯವಾಗಿತ್ತು ಎಂದು ಶಮಿ ಹೇಳಿದ್ದಾರೆ.
ಅವರು ಡ್ರೆಸ್ಸಿಂಗ್ ರೂಮ್ ಪ್ರವೇಶಿಸಿದಾಗ ನಮಗೆ ಆಘಾತವಾಯಿತು. ನಂತರ ಅವರು ಬಂದು ನಮ್ಮೆಲ್ಲರೊಡನೆ ಮಾತನಾಡಿದರು. ಆ ಬಳಿಕ ನಾವೆಲ್ಲರು ಪರಸ್ಪರ ಮಾತನಾಡಲು ಪ್ರಾರಂಭಿಸಿದೆವು. ಈ ಸೋಲಿನಿಂದ ನಾವು ಮುಂದುವರಿಯಬೇಕು ಎಂದು ಮೋದಿ ಹೇಳಿದರು. ಪ್ರಧಾನಿಯವರ ಭೇಟಿ ನಮಗೆ ಬಹಳಷ್ಟು ಸಹಾಯ ಮಾಡಿದೆ, ಎಂಬುದು ಶಮಿ ಹೇಳಿದ್ದಾರೆ.