ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ | ಒಳ್ಳೆಯ ವಿಚಾರಗಳಿಗೆ ಹೆಚ್ಚು ಆದ್ಯತೆ ದೊರೆಯಲಿ: ಸ್ಪೀಕರ್ ಖಾದರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಮಾಧ್ಯಮ ಕ್ಷೇತ್ರಕ್ಕೆ ಹೊಸದಾಗಿ ಹೆಜ್ಜೆಯಿಡುವ ಯುವಕರಿಗೆ ಸಂಬಂಧಿಸಿದ ಸಂಸ್ಥೆಗಳು ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸುವುದು ಅತ್ಯಂತ ಅಗತ್ಯ’ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ‘ಮಾಮ’ (ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳ ಗಂಗೋತ್ರಿ) ಆಯೋಜಿಸಿದ್ದ ‘ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವರದಿಗಾರ ಸ್ವಸ್ತಿಕ್ ಕನ್ಯಾಡಿ ಸೇರಿದಂತೆ ರಶ್ಮಿ ಯಾದವ್, ಯಕ್ಷಿತಾ, ಶ್ಯಾಮ್‌ಪ್ರಸಾದ್, ನವ್ಯಶ್ರೀ ಶೆಟ್ಟಿ, ಚೈತ್ರಾ, ಇಂದೂಧರ ಹಳೆಯಂಗಡಿ ಹಾಗೂ ನಳಿನಿ ಅವರು ‘ಮಾಮ್ ಇನ್‌ಸ್ಪೈರ್ ಪ್ರಶಸ್ತಿ’ಗೆ ಭಾಜನರಾದರು.

ಸುದ್ದಿಯಾಗುವಂತಹ ಸಂಗತಿಗಳು ಸುದ್ದಿಯಾಗಬೇಕೆ ಹೊರತು ಜಾಲತಾಣಗಳ ವ್ಯೂವ್ಸ್‌ಗಳೇ ಸುದ್ದಿಯಾಗಬಾರದು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ಜನಸಾಮಾನ್ಯರ ಭಾವನೆಗಳನ್ನು ಸರ್ಕಾರ ಮತ್ತು ಅಧಿಕಾರಿಗಳಿಗೆ ಮುಟ್ಟಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕಾಗುತ್ತದೆ. ಹೀಗಿರುವಾಗ ಯುವ ಪತ್ರಕರ್ತರು ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಸಮರ್ಪಕವಾಗಿ ಪ್ರಶ್ನಿಸುವಂತಾಗುವ ಸಾಮರ್ಥ್ಯ ಹೊಂದಬೇಕು ಎಂದು ಅವರು ಹೇಳಿದರು.

ಕರಾವಳಿ, ಮಲೆನಾಡಿನ ಕಲೆ ಯಕ್ಷಗಾನ ಪಸರಿಸುತ್ತಿರುವ ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಹಾಗೂ ಮಾಮ್ ಸಂಸ್ಥೆಯ ಕಾರ್ಯಕ್ರಮಗಳಿಗೆ ಪ್ರಸಕ್ತ ತಿಂಗಳ ತಮ್ಮ ವೇತನದಿಂದ ತಲಾ ೩೦ ಸಾವಿರ ನೆರವು ನೀಡುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಘೋಷಿಸಿದರು.

ಏಷ್ಯಾನೆಟ್ ಸುವರ್ಣ ನ್ಯೂಸ್-ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಮಾತನಾಡಿ, ವಿಪರೀತ ವಾಣಿಜ್ಯಿಕರಣ, ಸೈದ್ಧಾಂತಿಕ ಅತಿರೇಕತೆ, ಸುಳ್ಳುಸುದ್ದಿಗಳ ಅಬ್ಬರದಿಂದಾಗಿ ಮಾಧ್ಯಮಕ್ಕೆ ಕುಂದುಂಟಾಗುತ್ತಿದೆ. ಪತ್ರಿಕೆಗಿರುವ ತನ್ನ ಸಿದ್ಧಾಂತ ಅತೀರೇಕಕ್ಕೆ ಹೋಗಬಾರದು. ಹಾಗೆಯೇ ವಾಣಿಜ್ಯಿಕರಣವೂ ಹೆಚ್ಚು ಮುಖ್ಯವಾಗದೆ ಸಮತೋಲನ ಕಾಯ್ದುಕೊಳ್ಳಬೇಕಿದೆ ಎಂದರು.
ಸಮಾರಂಭದಲ್ಲಿ ಯೂನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷ ಮುಖ್ಯಸ್ಥ ಆರ್.ಉಪೇಂದ್ರ, ಮಾಮ್ ಗೌರವಾಧ್ಯಕ್ಷ ವೇಣು ಶರ್ಮಾ, ಅಧ್ಯಕ್ಷ ನವೀನ್ ಅಮ್ಮೆಂಬಳ, ಪ್ರೊ.ಪ್ರತಿಭಾ ಪಾರ್ಶ್ವನಾಥ್, ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!