ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಇಂದಿನ ಸ್ಟಾರ್ ನಿರ್ದೇಶಕರಲ್ಲಿ ಆದಿತ್ಯ ಧರ್ ಮುಂಚೂಣಿಯಲ್ಲಿದ್ದಾರೆ. ಇಂದು ಅವರ ಬೆನ್ನುತಟ್ಟುವವರ ಸಂಖ್ಯೆ ದೊಡ್ಡದಿದೆ ನಿಜ, ಆದರೆ ಈ ಯಶಸ್ಸಿನ ಹಿಂದೆ ವರ್ಷಗಳ ಕಣ್ಣೀರು ಮತ್ತು ಸತತ ಪ್ರಯತ್ನದ ಕಥೆಯಿದೆ.
ಆದಿತ್ಯ ಧರ್ ಅವರು ಚಿತ್ರರಂಗಕ್ಕೆ ಬರುವ ಮೊದಲು ಕಂಡಿದ್ದು ಕ್ರಿಕೆಟ್ ಕನಸು. ಭಾರತದ ಅಂಡರ್-19 ತಂಡವನ್ನು ಪ್ರತಿನಿಧಿಸಿ ದೇಶಕ್ಕಾಗಿ ಆಡಬೇಕೆಂಬ ಹಂಬಲ ಅವರಿಗಿತ್ತು. ಆದರೆ ವಿಧಿಬರಹ ಬೇರೆಯೇ ಇತ್ತು. ಕ್ರಿಕೆಟ್ ಕನಸು ಭಗ್ನಗೊಂಡಾಗ ಅವರು ಆರಿಸಿಕೊಂಡಿದ್ದು ಸಿನಿಮಾ ರಂಗವನ್ನು.
ಸಿನಿಮಾ ಜರ್ನಿಯ ಆರಂಭದಲ್ಲಿ ಆದಿತ್ಯ ಧರ್ ಭೀಕರ ವಂಚನೆಗೆ ಒಳಗಾಗಿದ್ದರು. ಅವರು ಶ್ರದ್ಧೆಯಿಂದ ಬರೆದಿದ್ದ ಸ್ಕ್ರಿಪ್ಟ್‌ಅನ್ನು ಕದ್ದು ಸಿನಿಮಾ ಮಾಡಲಾಗಿತ್ತು. ವಿಶೇಷವೆಂದರೆ ಆ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು! ಈ ಘಟನೆಯಿಂದ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದರು. “ನನ್ನ ಸಿನಿಮಾ ಅರ್ಧಕ್ಕೆ ನಿಂತುಹೋದ ಸಂದರ್ಭಗಳೂ ಇವೆ. ಶೂಟಿಂಗ್ ಆರಂಭಕ್ಕೆ ಕೇವಲ 15 ದಿನ ಬಾಕಿ ಇರುವಾಗ ಚಿತ್ರಗಳು ಕೈಬಿಟ್ಟು ಹೋಗಿವೆ” ಎಂದು ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕಷ್ಟದ ಸಮಯದಲ್ಲಿ ಅವರ ಅಮ್ಮ ನೀಡಿದ ಮಾತು ಅವರ ಬದುಕನ್ನೇ ಬದಲಿಸಿತು. “ದೇವರು ನಿನಗೆ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತಹ ದೊಡ್ಡ ಅವಕಾಶ ನೀಡುತ್ತಾನೆ. ಅದು 3 ವರ್ಷಕ್ಕೆ ಬರಬಹುದು ಅಥವಾ 30 ವರ್ಷಕ್ಕೆ ಬರಬಹುದು. ತಡವಾಗಿ ಬಂದಷ್ಟೂ ಅದರ ಮೌಲ್ಯ ಜಾಸ್ತಿ ಇರುತ್ತದೆ, ಅಲ್ಲಿಯವರೆಗೆ ಕಾಯಿ” ಎಂದು ಅಮ್ಮ ಹೇಳಿದ್ದರಂತೆ. ಆ ಮಾತು ಇಂದು ನಿಜವಾಗಿದೆ.
ಸತತ ಸೋಲು ಮತ್ತು ಮೋಸಗಳನ್ನು ಎದುರಿಸಿ ಇಂದು ಆದಿತ್ಯ ಧರ್ ಬಾಲಿವುಡ್‌ನ ಅಜೇಯ ಶಕ್ತಿಯಾಗಿ ಬೆಳೆದು ನಿಂತಿದ್ದಾರೆ.



