August 8, 2026
Saturday, August 8, 2026
spot_img

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ ಮಾಲೀಕನ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ: ಎರಡನೇ ದಿನವೂ ಇಡಿ ಶೋಧ

ಹೊಸದಿಗಂತ ವರದಿ ಬೆಳಗಾವಿ:

ಶಿವಂ ಅಸೋಸಿಯೇಟ್ ಕಂಪನಿ ಮಾಲೀಕ ಶಿವಾನಂದ ನೀಲಣ್ಣವರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಶೋಧ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ.

ಬೆಳಗಾವಿಯ ಶಿವಬಸವ ನಗರದಲ್ಲಿರುವ ಎಂ.ಎಚ್. ಟವರ್ನಲ್ಲಿ ಇಡಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಸಿಆರ್‌ಪಿಎಫ್ ತುಕಡಿಯ ಬಿಗಿ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗೋವಾ ಹಾಗೂ ಮಂಗಳೂರು ಮೂಲದ ಇಡಿ ಅಧಿಕಾರಿಗಳ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ನಿನ್ನೆಯಿಂದಲೇ ದಾಖಲೆಗಳ ಪರಿಶೀಲನೆ ನಡೆಸುತ್ತಿವೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ಇಡಿ, ಪ್ರಕರಣದ ತನಿಖೆಯ ಭಾಗವಾಗಿ ಶಿವಾನಂದ ನೀಲಣ್ಣವರ್ ಅವರ ಮನೆ ಸೇರಿದಂತೆ ಸಂಬಂಧಿತ ಸ್ಥಳಗಳಲ್ಲೂ ಶೋಧ ನಡೆಸಿದೆ.

ಶಿವಾನಂದ ನೀಲಣ್ಣವರ್ ಅವರನ್ನು ಇಡಿ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು, ಹಣಕಾಸು ವ್ಯವಹಾರಗಳು, ಹೂಡಿಕೆಗಳು ಹಾಗೂ ಇತರ ವಹಿವಾಟುಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುತ್ತಿದ್ದಾರೆ. ದಾಖಲೆಗಳ ಪರಿಶೀಲನೆಯೂ ಮುಂದುವರಿದಿದೆ. ಇದೇ ವೇಳೆ ಶಿವಾನಂದ ನೀಲಣ್ಣವರ್ ಅವರ ಪತ್ನಿ ಹಾಗೂ ಸಹೋದರರನ್ನೂ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ವಿವಿಧ ದಾಖಲೆಗಳು ಮತ್ತು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.

ಎರಡನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ತನಿಖೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !