ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಸಚಿವರನ್ನು ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋದ ವೇಳೆ ಆಸ್ಪತ್ರೆಯಲ್ಲೇ ಸಚಿವ ಬಾಲಾಜಿ ಗಳಗಳನೇ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಮಂಗಳವಾರ (ಜೂ.13) ಬಾಲಾಜಿ ಅವರ ನಿವಾಸದ ಮೇಲೆ ದಾಳಿ ನಡೆಸಿತು. ದಾಳಿಯ ನಂತರ, ಇಡಿ ಬಾಲಾಜಿಯನ್ನು 18 ಗಂಟೆಗಳ ಕಾಲ ವಿಚಾರಣೆಗೆ ಕರೆದೊಯ್ದಿದೆ. ಇಂದು ಬೆಳಗ್ಗೆ ಇಡಿ ಅಧಿಕಾರಗಳು ಬಾಲಾಜಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಈ ವೇಳೆ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾದ ಡಿಎಂಕೆ ನಾಯಕ, ವಾಹನದೊಳಗೆ ನೋವಿನಿಂದ ಮಲಗಿ ಅಳುತ್ತಿರುವುದು ಕಂಡುಬಂದಿತು. ಅವರ ಬೆಂಬಲಿಗರು ತನಿಖಾ ಸಂಸ್ಥೆಯ ವಿರುದ್ಧ ಈ ವೇಳೆ ಘೋಷಣೆಗಳನ್ನು ಕೂಗಿದರು.
ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಅಧಿಕಾರಿಗಳು ಮಂಗಳವಾರ ಬಾಲಾಜಿ ಅವರ ನಿವಾಸ ಹಾಗೂ ತಮಿಳುನಾಡು ಸಚಿವಾಲಯದ ಅವರ ಕಚೇರಿ ಮತ್ತು ಕರೂರ್ ಜಿಲ್ಲೆಯ ಅವರ ಸಹೋದರ ಮತ್ತು ಆಪ್ತ ಸಹಾಯಕನ ನಿವಾಸಗಳ ಮೇಲೆ ದಾಳಿ ನಡೆಸಿತ್ತು.