ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರನ್ನು ಇಡಿ ಬಂಧಿಸಿದೆ.
ಇದೇ ತಿಂಗಳ ಮೇ 6 ರಂದು ಜಾರ್ಖಂಡ್ನಲ್ಲಿ ದಾಳಿ ನಡೆಸಿದ್ದ ಇಡಿಅಧಿಕಾರಿಗಳ ತಂಡ ಸಚಿವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತು ಅವರ ಮನೆಕೆಲಸಗಾರ ಜಹಾಂಗೀರ್ ಆಲಂ ಮನೆಯಲ್ಲಿ ಸಿಕ್ಕ 35 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡ ಮರುದಿನವೇ ಇಬ್ಬರನ್ನೂ ಇಡಿ ಬಂಧಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರವೂ ಸಚಿವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಇಡಿ, ಬುಧವಾರ ಬಂಧಿಸಿದೆ .
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಚಿಯ ಗ್ರಾಮೀಣಾಭಿವೃದ್ಧಿ ಸಚಿವಾಲಯ ಕಚೇರಿಯಲ್ಲೂ ಶೋಧ ನಡೆಸಲಾಗಿದೆ. ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದೆ, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಇಡಿ ಹೇಳಿದೆ.
ಏನಿದು ಕೇಸ್?
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮೇ 6ರಂದು ಇಡಿ ಅಧಿಕಾರಿಗಳ ತಂಡ ರಾಂಚಿಯ ವಿವಿಧೆಡೆ ದಾಳಿ ನಡೆಸಿತ್ತು. ಈ ವೇಳೆ ಗ್ರಾಮೀಣಾಭಿವೃದ್ಧಿ ಮಂತ್ರಿಯೂ ಆಗಿರುವ ಕಾಂಗ್ರೆಸ್ ಮುಖಂಡ ಆಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಸಹಾಯಕನ ಮನೆಯಲ್ಲಿ ಈ ದುಡ್ಡಿನ ರಾಶಿ ಕಂಡುಬಂದಿತ್ತು. ಯಾವುದೇ ದಾಖಲೆಗಳನ್ನು ಒಳಗೊಂಡಿರದ ಈ ಹಣವನ್ನು 12 ಗಂಟೆಗಳ ಕಾಲ 6 ಮಷಿನ್ಗಳ ಮೂಲಕ ಅಧಿಕಾರಿಗಳು ಎಣಿಕೆ ಮಾಡಿದ್ದರು. ಸತತ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು 32 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದರು. ಇದೇ ವೇಳೆ ಕೇಂದ್ರಿಯ ತನಿಖಾ ದಳ ನಡೆಸಿದ್ದ ದಾಳಿಯಲ್ಲೂ 3 ಕೋಟಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು.