ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ‘ಡೀಪ್‌ಫೇಕ್’ ತಂತ್ರಜ್ಞಾನವು ಸೈಬರ್ ಕ್ರಿಮಿನಲ್‌ಗಳ ಪಾಲಿಗೆ ಹೊಸ ಅಸ್ತ್ರವಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ ಅವರಂತಹ ಗಣ್ಯ ವ್ಯಕ್ತಿಗಳ ವಿಡಿಯೋಗಳನ್ನು ತಿರುಚಿ, ಅವರು ಹೂಡಿಕೆಯ ಬಗ್ಗೆ ಸಲಹೆ ನೀಡುತ್ತಿರುವಂತೆ ಬಿಂಬಿಸಲಾಗುತ್ತಿದೆ.
ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸುಧಾ ಮೂರ್ತಿಯವರು “ಕೇವಲ 200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಲಾಭ ಗಳಿಸಿ” ಎಂದು ಹೇಳುತ್ತಿರುವಂತೆ ತೋರಿಸಲಾಗಿದೆ. ಇದು ಸಂಪೂರ್ಣವಾಗಿ ನಕಲಿ ಎಂದು ಸ್ವತಃ ಸುಧಾ ಮೂರ್ತಿಯವರೇ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿರುವ ಅವರು, “ನನ್ನ ಧ್ವನಿ ಮತ್ತು ಮುಖವನ್ನು ಬಳಸಿಕೊಂಡು ಹಣಕಾಸು ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿರುವ ವಿಡಿಯೋಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇವು ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿರುವ ಸುಳ್ಳು ವಿಡಿಯೋಗಳಾಗಿದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಒಳಗಾಗಬಾರದು,” ಎಂದು ಮನವಿ ಮಾಡಿದ್ದಾರೆ.
ಯಾವುದೇ ಗಣ್ಯ ವ್ಯಕ್ತಿಗಳು ಸೋಷಿಯಲ್ ಮೀಡಿಯಾದಲ್ಲಿ ಹಣ ಹೂಡಿಕೆ ಮಾಡುವಂತೆ ವೈಯಕ್ತಿಕವಾಗಿ ಒತ್ತಾಯಿಸುವುದಿಲ್ಲ. ಅತಿಯಾದ ಲಾಭದ ಆಮಿಷ ತೋರಿಸುವ ಇಂತಹ ಜಾಹೀರಾತುಗಳ ಹಿಂದೆ ದೊಡ್ಡ ಮಟ್ಟದ ವಂಚನೆಯ ಜಾಲವಿರುತ್ತದೆ. ಯಾವುದನ್ನೇ ನಂಬುವ ಮೊದಲು ಅದರ ಅಧಿಕೃತತೆಯನ್ನು ಪರಿಶೀಲಿಸುವುದು ಇಂದಿನ ಅಗತ್ಯ.


