ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಹೊರವಲಯದ ಗುರುಪುರ-ಕೈಕಂಬ ಸಮೀಪದ ಮಳಲಿ ರಸ್ತೆಯಲ್ಲಿ ವಾನರನ ದಾಳಿಗೆ ಆಟೋ ರಿಕ್ಷಾ ಮಗುಚಿ ಬಿದ್ದು ಚಾಲಕ ಮೃತ ಪಟ್ಟ ಘಟನೆ ನಡೆದಿದ್ದು, ಇದೀಗ ಮಂಗಳೂರು ತಾಲೂಕಿನ ಕುಪ್ಪೆಪದವು ನೆಲ್ಲಿಜೋರ ಎಂಬಲ್ಲಿಯ ನಿವಾಸಿ ಲೀಲಾಕ್ಷಿ (65)ಎಂಬವರ ಮೇಲೆ ಕೋತಿಯೊಂದು ದಾಳಿ ನಡೆಸಿದ ಪರಿಣಾಮ ಲೀಲಾಕ್ಷಿ ಅವರ ಕೈಗೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ .
ನೆಲ್ಲಿಜೋರ ಮತ್ತು ಎಡಪದವು ಗ್ರಾಮದ ಕೊರ್ಡೇಲ್ ಪರಿಸರದಲ್ಲಿ ಕೋತಿಯೊಂದು ಉಪಟಳ ನೀಡುತ್ತಿದ್ದು, ನೆಲ್ಲಿಜೋರ ಬಳಿಯ ದಿನೇಶ್ ಎಂಬವರ ಮನೆಗೆ ದಾಳಿ ನಡೆಸಿದೆ ಅಲ್ಲದೇ ಓಡ್ಡೂರು ಎಂಬಲ್ಲಿ ಮಹಿಳೆಯೋರ್ವರ ಮೇಲೆ ಕೂಡಾ ದಾಳಿ ನಡೆಸಿದೆ.
ದಾಳಿಯಿಂದ ಗಾಯಗೊಂಡ ಮಹಿಳೆ ಲೀಲಾಕ್ಷಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೈಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ನೆಲ್ಲಿಜೋರ ಮತ್ತು ಕೊರ್ಡೇಲ್ ಪರಿಸರದಲ್ಲಿ ಸದಾ ಮನೆಯ ಬಾಗಿಲನ್ನು ಮುಚ್ಚಿಕೊಂಡೆ ಇರಬೇಕಾದ ಪರಿಸ್ಥಿತಿ ಎದುರಾಗಿದೆ ಅಲ್ಲದೇ ವಾನರ ಯಾವ ಸಮಯದಲ್ಲಿ ದಾಳಿ ನಡೆಸುತ್ತದೆ ಎಂದು ಅರಿವಾಗದೆ ಇಲ್ಲಿ ತೋಟಕ್ಕೆ ಅಥವಾ ಹೊರಗಡೆ ಹೋಗುವಾಗ ಕೋಲು ಹಿಡಿದುಕೊಂಡೆ ಹೋಗಬೇಕಾಗಿದೆ ಎಂದು ಹಲವರು ದೂರಿಕೊಂಡಿದ್ದಾರೆ.
ಅರಣ್ಯ ಇಲಾಖೆ ಎಚ್ಛೆತ್ತುಕೊಂಡು ಜನರ ಮೇಲೆ ದಾಳಿ ನಡೆಸುವ ಕೋತಿಯನ್ನು ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.