Tuesday, December 16, 2025

‘ಮಂಕಿ ಫೀವರ್’ ಸ್ಫೋಟ: 6 ಜನರಿಗೆ ಸೋಂಕು, ಚಿಕ್ಕಮಗಳೂರು ಗಡಿಗೂ ವಿಸ್ತರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಮರುಕಳಿಸಿದ್ದು, ಈ ಬಾರಿ ನಿರೀಕ್ಷೆಗೂ ಮುನ್ನವೇ ಪ್ರಕರಣಗಳು ವರದಿಯಾಗಿವೆ. ಹೊಸನಗರ ತಾಲೂಕಿನ ಬಿಳ್ಕೋಡಿ ಗ್ರಾಮದಲ್ಲಿ ಒಟ್ಟು ಆರು ಮಂದಿಗೆ ಕೆಎಫ್‌ಡಿ ಸೋಂಕು ದೃಢಪಟ್ಟಿದೆ.

ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಅಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಈ ಬಾರಿ ನವೆಂಬರ್‌ನಿಂದಲೇ ಸೋಂಕು ಕಾಣಿಸಿಕೊಂಡಿರುವುದು ಆರೋಗ್ಯ ಇಲಾಖೆಗೆ ಹೊಸ ಸವಾಲಾಗಿದೆ. ಕಳೆದ ವಾರ 55 ವರ್ಷದ ಮಹಿಳೆಯೊಬ್ಬರಲ್ಲಿ ಮೊದಲಿಗೆ ಕೆಎಫ್‌ಡಿ ಕಾಣಿಸಿಕೊಂಡಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಇತರ ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ, ಮತ್ತೆ ಐವರಲ್ಲಿ ಸೋಂಕು ಪಾಸಿಟಿವ್‌ ಬಂದಿದೆ. ಸದ್ಯ ಸೋಂಕಿತರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ, ಮಂಗನ ಕಾಯಿಲೆಗೆ ನೀಡುತ್ತಿದ್ದ ಲಸಿಕೆ ವಿತರಣೆಯನ್ನು ಮೂರು ವರ್ಷಗಳ ಹಿಂದೆ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಪರಿಸ್ಥಿತಿಯ ಮೇಲೆ ಹೆಚ್ಚಿನ ನಿಗಾ ವಹಿಸಿದೆ.

ಮಲೆನಾಡಿನ ಜನರಲ್ಲಿ ಆತಂಕ ಮೂಡಿಸಿರುವ ಮತ್ತೊಂದು ವಿಚಾರವೆಂದರೆ, ಹಲವು ಪ್ರದೇಶಗಳಲ್ಲಿ ಉಣುಗು (ಕಿಲುಬು), ಮತ್ತು ಸತ್ತ ಮಂಗಗಳಲ್ಲಿ ರೋಗ ಪಾಸಿಟಿವ್‌ ಕಂಡುಬರದಿದ್ದರೂ, ಮನುಷ್ಯರಲ್ಲಿ ಮಾತ್ರ ಸೋಂಕು ದೃಢಪಡುತ್ತಿದೆ. ಇದು ರೋಗ ಹರಡುವಿಕೆಯ ಮೂಲವನ್ನು ಪತ್ತೆಹಚ್ಚುವಲ್ಲಿ ಗೊಂದಲ ಸೃಷ್ಟಿಸಿದೆ.

ಈ ನಡುವೆ, ರೋಗವು ನೆರೆಯ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗಕ್ಕೂ ವಿಸ್ತರಿಸಿದೆ. ಕೊಪ್ಪ ತಾಲೂಕಿನ ಕಮ್ಮರಡಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಪಾಸಿಟಿವ್‌ ಬಂದಿದ್ದು, ಇದು ಚಿಕ್ಕಮಗಳೂರು ಜಿಲ್ಲೆಯ ಮೊದಲ ಪ್ರಕರಣವಾಗಿದೆ.

error: Content is protected !!