ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮತ್ತು ಮುಂಬೈ ನಗರಗಳಿಗೆ 62 ವರ್ಷಗಳ ಬಳಿಕ ಒಂದೇ ದಿನ ಮುಂಗಾರು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
1961 ಜೂನ್ 21ರಂದು ಎರಡೂ ನಗರಗಳಿಗೂ ಏಕ ಕಾಲಕ್ಕೆ ಮುಂಗಾರು ಪ್ರವೇಶಿಸಿತ್ತು.ಆ ಬಳಿಕ ಇಂದು ದೆಹಲಿಗೆ ಎರಡು ದಿನ ಮುಂಚಿತವಾಗಿ ಹಾಗೂ ಮುಂಬೈಗೆ ಎರಡು ವಾರ ವಿಳಂಬವಾಗಿ ಮುಂಗಾರು ತಲುಪಿದೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಡಿ.ಎಸ್.ಪೈ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ತಾಸುಗಳಲ್ಲಿ ದೆಹಲಿಯ ಸಫ್ದರ್‌ಜಂಗ್‌ನಲ್ಲಿರುವ ಹವಾಮಾನ ಕೇಂದ್ರದಲ್ಲಿ 48.3 ಮಿ.ಮೀ ಮಳೆ ದಾಖಲಾಗಿದೆ. ದಾಸ್ನಾದಲ್ಲಿ 80ಮಿ.ಮೀ., ಜಾಫರ್‌ಪುರ ಮತ್ತು ಲೋಧಿ ರಸ್ತೆಯಲ್ಲಿ 60ಮಿ.ಮೀ ಮಳೆ ಸುರಿದಿದೆ ಎಂದು ಮೂಲಗಳು ವಿವರಿಸಿವೆ.
ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರಿ ಮಳೆಯಾಗಿದ್ದು ಕೆಲವೆಡೆ ತಗ್ಗಿನ ಪ್ರದೇಶಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಗುಜರಾತ್, ರಾಜಸ್ಥಾನ, ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಿಗೂ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.