ಕೈಕೊಟ್ಟ ಮುಂಗಾರು, ಮಾರಾಟವಾಗದೇ ಉಳಿದ ಸಸಿಗಳು

-ರಮೇಶ ಮೋಟೆ

ನರಗುಂದ: ಪ್ರತಿ ವರ್ಷ ಜೂನ್ ಹೊತ್ತಿಗೆ ಆರಂಭವಾಗಬೇಕಿದ್ದ ಮುಂಗಾರು ಈ ವರ್ಷ ಕೈ ಕೊಟ್ಟಿದೆ. ಅರಣ್ಯೀಕರಣಕ್ಕೆ ಮಾರಾಟವಾಗಬೇಕಿದ್ದ ಸಸಿಗಳು ವರುಣನ ವಿಳಂಬದಿಂದ ಮಾರಾಟವಾಗದೇ ಉಳಿದಿದ್ದು, ಸಾಕಷ್ಟು ತೊಂದರೆ, ಅನಾನುಕೂಲತೆಗೆ ದಾರಿ ಮಾಡಿದೆ.

ನಗರದ ಹೊಸೂರಿನ ಕೆಂಪಗೇರಿ ಕೆರೆ ಹತ್ತಿರ ಸಾಮಾಜಿಕ ಅರಣ್ಯ ವಲಯದ 1 ಹೆಕ್ಟೇರ್ ಭೂಪ್ರದೇಶವಿದೆ. ಅಲ್ಲಿನ ಸಸ್ಯ ಪಾಲನಾ ಕ್ಷೇತ್ರದಲ್ಲಿ ಅರಣ್ಯೀಕರಣಕ್ಕಾಗಿ ಮತ್ತು ರೈತರ ಹೊಲಗಳಲ್ಲಿ ಗಿಡಮರ ಬೆಳೆಸಲು ಸಾವಿರಾರು ಗಿಡಗಳನ್ನು ಬೆಳೆಸಲಾಗುತ್ತಿದೆ. ಪರಿಸರ ಉಳಿಸಿ ಬೆಳೆಸಲು ಸಸ್ಯ ಪಾಲನಾ ಕ್ಷೇತ್ರದ ಸದುಪಯೋಗ ಆಗಬೇಕಾಗಿದೆ.

ಪ್ರತಿ ವರ್ಷ ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಸಸ್ಯ ಪಾಲನಾ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸಲಾಗತ್ತಿದೆ. ಬೆಳೆದ ಎಲ್ಲ ಸಸ್ಯಗಳು ಜೂನ್ ಮತ್ತು ಜುಲೈ ಈ ಎರಡು ತಿಂಗಳಲ್ಲಿ ಮಾರಾಟವಾಗುತ್ತವೆ. ಆದರೆ ಈ ಬಾರಿ ಮಳೆಯಾಗದ ಕಾರಣ ಮತ್ತು ಗಿಡಗಳ ದರವು ಹೆಚ್ಚಾಗಿದ್ದರಿಂದ ಅವುಗಳು ಮಾರಾಟವಾಗುತ್ತಿಲ್ಲ. ಅವುಗಳ ಸಂರಕ್ಷಣೆಗಾಗಿ 3 ಸಿಹಿ ನೀರಿನ ಕೊಳವೆ ಬಾವಿಗಳಿವೆ. ಸಸಿಗಳಿಗೆ ನೀರುಣಿಸಲು 5 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆಂದು ಸಸ್ಯ ಪಾಲನಾ ಸಿಬ್ಬಂದಿ ಹೇಳುತ್ತಾರೆ.

ಸಸ್ಯ ಪಾಲನಾ ಕ್ಷೇತ್ರದಲ್ಲಿ ಸಿಗುವ ಗಿಡಗಳು:

ಬಸವನಪಾದ- 170, ಅರಳಿಮರ- 500, ಹುಣಸೆಮರ -320, ಹೆಬ್ಬೇವು- 1500, ಬೇವು- 450, ಸಿರಸಲ ಗಿಡ-200, ಹೊಂಗೆಮರ- 500, ಚಳ್ಳ ಮರ- 500, ರುದ್ರಾಕ್ಷಿ ಮರ- 100, ಬುರ್ಲಾಮರ- 300, ತಪಸಿ ಮರ- 400, ಬಂಗಾಲಿ ಗಿಡ- 320, ಪ್ಲಾಟೋ ಫಾರ್ಮ -200 , ರೇನ್ ಟ್ರೀ- 200 , ಬಾದಾಮಿಗಿಡ- 200, ಸಂಕೇಶ್ವರಗಿಡ- 50, ಪಪ್ಪಾಯಿ- 500, ಬೆಟ್ಟದ ನೆಲ್ಲಿ-100, ಇತರೇ ಗಿಡಗಳು ಸೇರಿದಂತೆ 8*12ರ ಬ್ಯಾಗ್ ಸೈಜನ ಗಿಡವೊಂದಕ್ಕೆ ರೂ.23 ದರದಲ್ಲಿ ಮಾರಲಾಗುತ್ತಿದೆ. ಅರಣ್ಯೀಕರಣಕ್ಕಾಗಿ 20 ಸಾವಿರದಷ್ಟು ಗಿಡಗಳನ್ನು ಬೆಳೆಸಲಾಗಿದೆ.

ಸಾಗವಾನಿ 500, ಮಹಾಗಣಿ1500, ನಿಂಬೆ -2000, ಪೇರಲ- 200, ಸೀತಾಫಲ- 500, ಕರಿಬೇವು- 1000, ಬೇವು 450, ನೇರಳೆ- 500, ಬನ್ನಿಗಿಡ- 100, ಚರ್ರಿಗಿಡ- 100, ಬದಾಮಿ-200, ಹೆಬ್ಬೇವು -300, ಹೊಂಗೆಮರ- 500, ಬೆಟ್ಟದ ನೆಲ್ಲಿ-100, ಇತರೇ ಗಿಡಗಳು ಸೇರಿದಂತೆ ಬ್ಯಾಗ್ ಸೈಜ್ 6*9ರ 35 ಸಾವಿರದಷ್ಟು ಗಿಡಗಳನ್ನು ಬೆಳೆಸಲಾಗಿದೆ. ಗಿಡವೊಂದಕ್ಕೆ ರೂ.6 ದರ ನಿಗದಿ ಮಾಡಲಾಗಿದೆ. ಈ ಎಲ್ಲ ಗಿಡಗಳನ್ನು ಹೊಲಗಳಲ್ಲಿ ಮತ್ತು ಮನೆಗಳ ಪಕ್ಕದಲ್ಲಿ ಜಾಗೆ ಇದ್ದರೆ ಅಲ್ಲಿ ಬೆಳೆಸಲು ರೈತರಿಗೆ ಮಾರಾಟಕ್ಕಾಗಿ ಇಡಲಾಗಿದೆ.

ಪರಿಸರ ಉಳಿಸಿ ಬೆಳೆಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ನರೇಗಾ ಮತ್ತು ಆರ್ಎಸ್ಪಿಡಿ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತದೆ. ಯೋಜನೆಗಳು ಶಿಸ್ತುಬದ್ಧವಾಗಿ ಕಾರ್ಯರೂಪಕ್ಕೆ ಬಂದರೆ ಉತ್ತಮ ಪರಿಸರ ಕಾಣಲು ಸಾಧ್ಯ. ಹೊಲದ ಬದುಗಳಲ್ಲಿ ಹಾಗೂ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ವೈಯಕ್ತಿಕವಾಗಿ ಹೊಲದ ಬದುವಿನಲ್ಲಿ ಗಿಡಗಳನ್ನು ಬೆಳೆಸಿದರೆ ಇಲಾಖೆಯಿಂದ ಒಂದು ಗಿಡಕ್ಕೆ ರೂ.90 ಪ್ರೋತ್ಸಾಹ ಧನ ಕೊಡಲಾಗುತ್ತದೆ. ಗಿಡಮರಗಳು ತಮಗಾಗಿ ಬದುಕದೇ, ಮನುಷ್ಯರು ಸೇರಿದಂತೆ ಸಮಸ್ತ ಜೀವಸಂಕುಲಗಳ ಹಿತಕ್ಕಾಗಿವೆ ಎಂಬುದನ್ನು ಅರಿಯಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!