ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಗಾರು ಅಬ್ಬರಕ್ಕೆ ಉತ್ತರ ಭಾರತ ನಲುಗಿದ್ದು, ಹಲವು ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತಕ್ಕೆ ಅನಾಹುತವೇ ಸೃಷ್ಟಿಯಾಗಿದೆ.
ಅದ್ರಲ್ಲೂ ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳು ಮುಳುಗಡೆಯಾಗಿದೆ. ಹಿಮಾಚಲ ಪ್ರದೇಶದ ಬಹುತೇಕ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹದಿಂದ ಪಟ್ಟಣ, ಗ್ರಾಮಗಳೇ ಸರ್ವನಾಶವಾಗಿದೆ.
ಇದೀಗ ಐದು ರಾಜ್ಯಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ಪಂಜಾಬ್ ಹಾಗೂ ಕೇರಳ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದೆಹಲಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಹಲವು ಕಟ್ಟಡಗಳ ಗೋಡಗಳು ಕುಸಿದಿದೆ. ಸತತ ಮಳೆ ಹಾಗೂ ಪ್ರವಾಹದಿಂದ ನಾಳೆಯೂ ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ 1 ರಿಂದ 12ನೇ ತರಗತಿ ವರೆಗಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪಂಜಾಬ್‌ನಲ್ಲಿ ಭಾರಿ ಮಳೆಯಿಂದ ನದಿಗಳು ಅಪಾಯದ ಮಟ್ಟ ಮೀರಿದೆ. ನದಿ ಪಾತ್ರದಲ್ಲಿನ ಕಟ್ಟಡಗಳು ಕುಸಿದಿದೆ. ಹೊಲಗಳು ಮುಳುಗಡೆಯಾಗಿದೆ. ಪಂಜಾಬ್‌ನಲ್ಲಿ ದಿಢೀರ್ ಪ್ರವಾಹಕ್ಕೆ ಸಿಲುಕಿ ಬಸ್ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಇದೀಗ ಪಂಜಾಬ್ ಹಾಗೂ ಹರ್ಯಾಣದ ಪರಿಸ್ಥಿತಿಯೂ ಆತಂಕ ಹೆಚ್ಚಿಸಿರುವ ಕಾರಣ ನಾಳೆಯೂ ರಜೆ ಘೋಷಿಸಲಾಗಿದೆ. ಪಂಜಾಬ್‌ನಲ್ಲು ಜುಲೈ 13ರ ವರೆಗೆ ರಜೆ ಘೋಷಿಸಲಾಗಿದೆ.
ಹಿಮಾಚಲ ಪ್ರದೇಶ ಭೂಕುಸಿತ, ಪ್ರವಾಹದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿದೆ. ಹಿಮಾಚಲ ಪ್ರದೇಶದಲ್ಲಿ ನಾಳೆ ರಜೆ ಘೋಷಿಸಲಾಗಿದೆ. ಇನ್ನು ಹಿಮಾಚಲ ಪ್ರದೇಶದ 10ಕ್ಕೂ ಹೆಚ್ಚು ಜಿಲ್ಲೆಯಲ್ಲಿ ರಜೆ ವಿಸ್ತರಣೆ ಮಾಡಲಾಗಿದ್ದು, ಮತ್ತೆರಡು ದಿನ ರಜೆ ಘೋಷಿಸಲಾಗಿದೆ.
ಕೇರಳದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೋಟಾಯಂ, ಆಲಫುಝಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದೆ. ಹೀಗಾಗಿ ಕೇರಳದ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ.