ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಇನ್ನು ನಾಳೆ ಕೂಡ ಹವಾಮಾನ ಇಲಾಖೆ, ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಹೀಗಾಗಿ ಜಿಲ್ಲೆಯ ಸಕಲೇಶಪುರ, ಬೇಲೂರು ತಾಲೂಕಿನ ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ಕಳೆದ 2 ದಿನಗಳಿಂದ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ ರಜೆ ನೀಡಿ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಿ ಉತ್ತರ ಕನ್ನಡ ಡಿಸಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಮಲೆನಾಡು ಭಾಗದ ಶಾಲೆಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ರಜೆ ಘೋಷಿಸಿದ್ದಾರೆ. ಮೂಡಿಗೆರೆ, ಕಳಸ, ಶೃಂಗೇರಿ, ಎನ್‌ಆರ್ ಪುರ ಹಾಗೂ ಕೊಪ್ಪ ತಾಲ್ಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದ್ರೆ, ಕಾಲೇಜುಗಳು ಎಂದಿನಂತೆ ತೆರೆದಿರಲಿವೆ ಎಂದು ತಿಳಿಸಿದ್ದಾರೆ.