ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂಗಾರು ಮಳೆಗೆ 64 ಜನರು, 105 ಜಾನುವಾರುಗಳು ಸಾವನ್ನಪ್ಪಿದ್ದು, . ಅಲ್ಲದೇ 2,682 ಮನೆಗಳು ಹಾನಿಗೊಂಡಿದ್ದರೇ, 2109 ಕಿಲೋಮೀಟರ್ ರಸ್ತೆ ಹಾಳಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಹಿತಿ ನೀಡಿದರು.
ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೋ ಸಂವಾದ ನಡೆಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಜೂನ್ ತಿಂಗಳಿನಲ್ಲಿ ಭಿಪರ್ ಜಾಯ್ ಚಂಡಮಾರುತದ ಕಾರಣದಿಂದಾಗಿ ಶೇ. 56 ರಷ್ಟು ಮಳೆ ಕೊರತೆ ಕಂಡು ಬಂತು. ಆದರೆ ಜುಲೈ ತಿಂಗಳಿನಲ್ಲಿ ಇಲ್ಲಿಯವರೆಗೆ ವಾಡಿಕೆ ಮಳೆ 228 ಮಿ.ಮೀ. ನಷ್ಟಿದೆ. ಆದರೆ ರಾಜ್ಯದಲ್ಲಿ 313 ಮಿ.ಮೀ. ಮಳೆ ಆಗಿದೆ. ಇದು ವಾಡಿಕೆ ಮಳೆಗಿಂತ ಶೇ. 37 ರಷ್ಟು ಹೆಚ್ಚಾಗಿದೆ ಎಂದರು.
ಜುಲೈ ತಿಂಗಳಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೂನ್ ಅಂತ್ಯಕ್ಕೆ ಇದ್ದ ಮಳೆ ಕೊರತೆಯು ಕಡಿಮೆಯಾಗಿದೆ. ಪ್ರಸ್ತುತ ಜೂನ್ 1 ರಿಂದ ಈ ವರೆಗೆ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. 6 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ ಎಂದರು.
ರಾಜ್ಯದ ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರು ಬಹುತೇಕ ಭರ್ತಿಯಾಗುತ್ತಿವೆ. ಕಳೆದ ಒಂದು ವಾರದಲ್ಲಿ ಒಟ್ಟು ಸಂಚಿತ ಒಳಹರಿವು 227 ಟಿಎಂಸಿಯಷ್ಟಾಗಿದೆ ಎಂದು ಮಾಹಿತಿ ನೀಡಿದರು.
ಮಳೆಯಿಂದಾಗಿ ಜೂನ್ 1 ರಿಂದ ಈ ವರೆಗೆ ರಾಜ್ಯದಲ್ಲಿ ನೀರಿನಲ್ಲಿ ಸಿಲುಕಿ, ಸಿಡಿಲು ಬಡಿದು, ಮನೆ ಕುಸಿದು, ಮರ ಬಿದ್ದು ಹಾಗೂ ಭೂಕುಸಿತದಿಂದ ಒಟ್ಟು 38 ಮಾನವ ಜೀವಹಾನಿ ಆಗಿದೆ. 35 ಜನರು ಗಾಯಗೊಂಡಿದ್ದಾರೆ ರಾಜ್ಯದಲ್ಲಿ 57 ಮನೆಗಳು ಸಂಪೂರ್ಣವಾಗಿ, 208 ಮನೆಗಳು ತೀವ್ರವಾಗಿ ಹಾಗೂ 2682 ಮನೆಗಳು ಭಾಗಶಃ ಹಾನಿಯಾಗಿದೆ.
ಹಾಗೆಯೆ 105 ಜಾನುವಾರುಗಳು ಮೃತಪಟ್ಟಿವೆ 185 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 356 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು- ಒಟ್ಟು 541.39 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ ಎಂದರು.
,ಅಲೆಗೆ 407 ಕಿ.ಮೀ. ರಾಜ್ಯ ಹೆದ್ದಾರಿ, 425 ಕಿ.ಮೀ. ಜಿಲ್ಲಾ ಹೆದ್ದಾರಿ, ಗ್ರಾಮೀಣ ರಸ್ತೆಗಳು 1277 ಕಿ.ಮೀ. ಒಟ್ಟು 2109 ಕಿ.ಮೀ. ರಸ್ತೆ ಹಾನಿಯಾಗಿದೆ. 189 ಸೇತುವೆಗಳು, 889 ಶಾಲಾ ಕೊಠಡಿಗಳು, 8 ಪ್ರಾಥಮಿಕ ಕೇಂದ್ರಗಳು, 269 ಅಂಗನವಾಡಿ ಕೇಂದ್ರಗಳು ಹಾನಿಯಾಗಿರುವುದು ವರದಿಯಾಗಿದೆ. 11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್ಫಾರ್ಮರ್ ಗಳು ಹಾನಿಯಾಗಿದ್ದು, 215 ಕಿ.ಮೀ. ಉದ್ದದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಪ್ರಸ್ತುತ ಎರಡು ಪರಿಹಾರ ಶಿಬಿರ ಗಳಲ್ಲಿ 50 ಜನರಿಗೆ ಆಶ್ರಯ ನೀಡಲಾಗಿದೆ ಎಂದರು.
ಜೂನ್ ತಿಂಗಳಿನಲ್ಲಿ ಮಳೆ ಕೊರತೆಯಾದ್ದರಿಂದ ಮುಂಗಾರು ಹಂಗಾಮಿನಲ್ಲಿ ಈ ವರೆಗೆ ಶೇ. 53 ರಷ್ಟು ಬಿತ್ತನೆಯಾಗಿದೆ. ವಾಡಿಕೆಯಂತೆ ಶೇ. 83 ರಷ್ಟು ಬಿತ್ತನೆಯಾಗಿದೆ ರಾಜ್ಯದಲ್ಲಿ 156 ಲಕ್ಷ ಟನ್ ಮೇವು ದಾಸ್ತಾನು ಇದ್ದು, ಮುಂದಿನ 29 ವಾರಗಳಲ್ಲಿ ಸಾಕಾಗುವಷ್ಟಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಅನುದಾನ ಲಭ್ಯವಿದೆ. ಎಸ್.ಡಿ.ಆರ್.ಎಫ್ ನ ಅಡಿಯೂ ಅನುದಾನದ ಲಭ್ಯತೆ ಇದೆ . ದುರಸ್ತಿಗೆ ತಕ್ಷಣ ಕ್ರಮ ವಹಿಸಿ. ಹೆಚ್ಚಿನ ಅನುದಾನ ಅಗತ್ಯವಿದ್ದರೆ ಮನವಿ ಕಳುಹಿಸಿ. ಜಿಲ್ಲೆಯ ಎಲ್ಲಾ ಆಗುಹೋಗುಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ನಿಗಾ ವಹಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿಯೇ ಉಳಿಯಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.