ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ದೇಶಕ್ಕೆ 2 ದಿನ ಮೊದಲೇ ಪ್ರವೇಶ ಮಾಡಿದ್ದ ಮಾನ್ಸೂನ್ ಮಾರುತ ಇದೀಗ ದೆಹಲಿ ತಲುಪಿದ್ದು, ವಾಡಿಕೆಗಿಂತ 9 ದಿನ ಮೊದಲೇ ಇಡೀ ದೇಶವನ್ನು ಆವರಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಜುಲೈ 8 ರ ಆಸುಪಾಸಿನಲ್ಲಿ ಮಾನ್ಸೂನ್ ಮಾರುತಗಳು ದೇಶಾದ್ಯಂತ ಆವರಿಸುತ್ತಿದ್ದವು. ಆ ಮೂಲಕ ಒಂಬತ್ತು ದಿನಗಳ ಮೊದಲು ದೇಶದ ಉಳಿದ ಭಾಗಗಳಿಗೆ ತಲುಪಿತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ, ಮಾನ್ಸೂನ್ ಇಂದು, ಜೂನ್ 29, 2025 ರಂದು ರಾಜಸ್ಥಾನ, ಪಶ್ಚಿಮ ಉತ್ತರ ಪ್ರದೇಶ ಮತ್ತು ಹರಿಯಾಣದ ಉಳಿದ ಭಾಗಗಳು ಮತ್ತು ಇಡೀ ದೆಹಲಿಗೆ ಮತ್ತಷ್ಟು ಮುಂದುವರೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ ಏಳು ದಿನಗಳಲ್ಲಿ ವಾಯುವ್ಯ, ಮಧ್ಯ, ಪೂರ್ವ ಮತ್ತು ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಭಾರೀ ಅಥವಾ ಅತಿ ಹೆಚ್ಚಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಜೂನ್ 29 ಮತ್ತು 30 ರಂದು ಜಾರ್ಖಂಡ್‌ನ ಕೆಲವು ಪ್ರದೇಶಗಳಲ್ಲಿ ಮತ್ತು ಜೂನ್ 29 ರಂದು ಒಡಿಶಾದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.