ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಚುರುಕು ಪಡೆದಿದ್ದು, ಸೋಮವಾರ ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆಯಾಗಿದೆ.
ಮಂಗಳೂರಿನಲ್ಲಿ ಈ ಮಳೆಗಾಲದ ಮೊದಲ ಕೃತಕ ನೆರೆ ಸೃಷ್ಟಿಯಾಗಿದೆ.
ಮಂಗಳೂರು ನಗರದಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ ಉತ್ತಮ ಮಳೆ ಸುರಿಯಿತು. ಸೋಮವಾರ ಹಗಲಿನ ವೇಳೆ ಮೋಡ ಕವಿದ ವಾತಾವರಣದೊಂದಿಗೆ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಬಳಿಕ ಮಳೆ ಬಿರುಸು ಪಡೆದಿದ್ದು, ನಗರದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದಿದೆ. ಭಾರಿಮಳೆ ಆರಂಭವಾದ ಕೆಲವೇ ಹೊತ್ತಿನಲ್ಲಿ ನಗರದ ಬಹುತೇಕ ರಸ್ತೆಗಳಲ್ಲಿ ಚರಂಡಿ, ಮ್ಯಾನ್‌ಹೋಲ್‌ನಿಂದ ಮಲಿನ ನೀರು ಉಕ್ಕೇರಿ ಕೃತಕ ಪ್ರವಾಹ ಉಂಟಾಗಿತ್ತು.
ಸಂಜೆ ವೇಳೆ ಪಂಪ್‌ವೆಲ್ ಫ್ಲೈಓವರ್ ತಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತು. ಪಂಪ್‌ವೆಲ್ ಬಳಿ ಹರಿಯುವ ರಾಜಕಾಲುವೆಗೆ ಸೇರುವ ನೀರು ಮೇಲ್ಸೆತುವೆ ತಳಭಾಗದಲ್ಲಿ ನಿಂತು ಕೃತಕ ನೆರೆ ಸೃಷ್ಟಿಯಾಯಿತು. ಇಲ್ಲಿ ನಾಲ್ಕು ಅಡಿಯಷ್ಟು ನೀರು ನಿಂತು ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರ ನಿರ್ಬಂಧಿಸಲಾಯಿತು. ಇದರಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಈಜುಕೊಳದಂತಾದ ಫ್ಲೈಓವರ್‌ನ ತಳಭಾಗದಲ್ಲಿ ವ್ಯಕ್ತಿಯೊಬ್ಬ ಮಳೆ ನೀರಿನಲ್ಲಿ ಈಜಾಡಿದ ಘಟನೆಯೂ ನಡೆಯಿತು. ಪಂಪ್‌ವೆಲ್‌ನ ಕೃತಕ ನೆರೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪಾಂಡೇಶ್ವರ ಸುಭಾಶ್‌ನಗರ, ಪಂಪ್‌ವೆಲ್ ವೃತ್ತ, ಕೊಟ್ಟಾರ ಚೌಕಿ, ಪಡೀಲ್ ಅಂಡರ್‌ಪಾಸ್, ಕುದ್ರೋಳಿ, ಬಂದರು, ಕದ್ರಿ, ಕೊಡಿಯಾಲಬೈಲ್ ಪ್ರದೇಶ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡವು.
ಲಾಲ್‌ಭಾಗ್, ಕೆಪಿಟಿ ಮೊದಲಾದ ಕಡೆ ಮಳೆ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ಹರಿದಿದೆ. ಮಳೆ ಮತ್ತು ಕೃತಕ ನೆರೆಯಿಂದ ನಗರದಲ್ಲಿ ಮಧ್ಯಾಹ್ನ ಬಳಿಕ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಜನರು ನಿಗದಿತ ಪ್ರದೇಶಗಳಿಗೆ ನಿರ್ದಿಷ್ಟ ಸಮಯಕ್ಕೆ ತೆರಳಲಾಗದೆ ಪರದಾಡಿದರು. ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿ ಬ್ಯಾಂಕ್‌ವೊಂದರ ಒಳಗೆ ನೀರು ನುಗ್ಗಿ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿತ್ತು. ಪಿವಿಎಸ್ ಸರ್ಕಲ್ ಬಳಿಯ ಖೈಬರ್‌ಪಾಸ್‌ನಲ್ಲಿ ಬಿಷಪ್ ಹೌಸ್ ಪಕ್ಕದ ಧರೆ ಕುಸಿದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.