ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭಗೊಳ್ಳಲಿದೆ. ಈ ಅಧಿವೇಶನವು ಆಗಸ್ಟ್ 12ಕ್ಕೆ ಪೂರ್ಣಗೊಳ್ಳಲಿದೆ. ಮತ್ತೆ ಆಗಸ್ಟ್ 18ರಂದು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ್, ಡೊನಾಲ್ಡ್ ಟ್ರಂಪ್, ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ.
ಅಧಿವೇಶನ ಆರಂಭವಾಗುವ ಮುನ್ನ ಭಾನುವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ, ಆಪರೇಷನ್ ಸಿಂಧೂರ್ ಮತ್ತು ಟ್ರಂಪ್ ಹೇಳಿಕೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಉತ್ತರಿಸಬೇಕೆಂದು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದವು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನಿಯಮಗಳ ಪ್ರಕಾರ ಆಪರೇಷನ್ ಸಿಂಧೂರ್ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
ವಿದೇಶ ಪ್ರವಾಸಗಳನ್ನು ಹೊರತುಪಡಿಸಿ, ಅಧಿವೇಶನದ ಸಮಯದಲ್ಲಿ ಪ್ರಧಾನಿ ಯಾವಾಗಲೂ ಸಂಸತ್ತಿನಲ್ಲಿರುತ್ತಾರೆ ಎಂದು ರಿಜಿಜು ತಿಳಿಸಿದ್ದಾರೆ. ಅಧಿವೇಶನ ನಡೆಯುತ್ತಿರುವಾಗಲೆಲ್ಲಾ, ಕೇಂದ್ರ ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುತ್ತಾರೆ ಎಂದರು.