ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರವಾಗಿ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಇಂದು ಸಹ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಗಿದೆ.
ಲೋಕಸಭೆಯನ್ನು ಮಧ್ಯಾಹ್ನ 12:00 ಗಂಟೆಗೆ ಮತ್ತು ರಾಜ್ಯಸಭೆಯನ್ನು 2:00 ಗಂಟೆಗೆ ಮುಂದೂಡಲಾಗಿದೆ.
ಎಸ್‌ಐಆರ್ ಮತ್ತು ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಸಂಸತ್ ಭವನದಿಂದ ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಪ್ರತಿಭಟನೆ ನಡೆಸಿದ ಹಲವು ವಿಪಕ್ಷಗಳ ನಾಯಕರನ್ನು ಪೊಲೀಸರು ಬಂಧಿಸಿದರು.
ಇಂದು ಸಹ ಇಂಡಿಯಾ ಬಣದ ಸಂಸದರು ಪ್ರತಿಭಟನೆ ಮುಂದುವರೆಸಿದ್ದಾರೆ. ಸಂಸತ್ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ವಿಪಕ್ಷ ಸದಸ್ಯರು ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತಿತರ ಸಂಸದರು ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ 124 ವರ್ಷ ವಯಸ್ಸಿನವರು ಎಂದು ಹೇಳಲಾದ ಮಿಂತಾ ದೇವಿ ಎಂಬ ಹೆಸರನ್ನು ಹೊಂದಿರುವ ಟಿ-ಶರ್ಟ್‌ಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು.