October 16, 2026
Friday, October 16, 2026
spot_img

ಮುಂದಿನ 3 ದಿನ ಮುಂಗಾರು ಅಬ್ಬರ: ನೆರೆ ರಾಜ್ಯಗಳು ಸೇರಿ ದೇಶಾದ್ಯಂತ ಬಿರುಗಾಳಿ ಸಹಿತ ಮಹಾಮಳೆ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಮುಂಗಾರು ಮಳೆಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ವಾರದಲ್ಲಿ ಕೇರಳ ರಾಜ್ಯಕ್ಕೆ ನೈಋತ್ಯ ಮುಂಗಾರು ಅಧಿಕೃತವಾಗಿ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಮುಂಗಾರು ಪ್ರವೇಶಕ್ಕೂ ಮುನ್ನವೇ ದೇಶದ ಹಲವು ಭಾಗಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿದ್ದು, ಮೇ 31 ರವರೆಗೆ ದೇಶದ ಸುಮಾರು 19 ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ಮುಂಗಾರು ಅಬ್ಬರ:

ಮುಂದಿನ 2 ರಿಂದ 3 ದಿನಗಳಲ್ಲಿ ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯ ಕರಾವಳಿ ತೀರ ಪ್ರದೇಶಗಳಲ್ಲಿ ಮುಂಗಾರು ಮಾರುತಗಳು ತೀವ್ರಗೊಳ್ಳಲಿದ್ದು, ಭಾರಿ ಗಾಳಿ-ಮಳೆಯಾಗುವ ಸಾಧ್ಯತೆಯಿದೆ.

ಯಾವ ಯಾವ ರಾಜ್ಯಗಳಲ್ಲಿ ಹೈ ಅಲರ್ಟ್?

ಶನಿವಾರ ಮತ್ತು ಭಾನುವಾರ ದೇಶದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಒಡಿಶಾ, ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್ ಮತ್ತು ಗೋವಾದಲ್ಲಿ ಗುಡುಗು, ಮಿಂಚು ಸಹಿತ ಆರ್ಭಟದ ಮಳೆಯಾಗಲಿದೆ.

ಗಂಟೆಗೆ 70 ಕಿ.ಮೀ ವೇಗದ ಬಿರುಗಾಳಿ ಭೀತಿ:

ಸಾಮಾನ್ಯವಾಗಿ ಈ ರಾಜ್ಯಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದರೆ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಇದರ ತೀವ್ರತೆ ಹೆಚ್ಚಿರಲಿದೆ. ಇಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಬಿಹಾರದ ಕೆಲವು ಭಾಗಗಳಲ್ಲಿ ಗಾಳಿಯ ವೇಗ ಬರೋಬ್ಬರಿ 70 ಕಿ.ಮೀ ತಲುಪುವ ಆತಂಕವಿದೆ.

Must Read