ಹೊಸದಿಗಂತ ವರದಿ, ಮಡಿಕೇರಿ:
ಯುದ್ಧಗ್ರಸ್ತವಾಗಿರುವ ಪುಟ್ಟ ರಾಷ್ಟ್ರ ಉಕ್ರೇನ್‍ನಲ್ಲಿ, ಶಿಕ್ಷಣಾರ್ಥ ತೆರಳಿರುವ ಕೊಡಗು ಜಿಲ್ಲೆಯ 10ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕುಶಾಲನಗರ ಸಮೀಪದ ಕೂಡ್ಲೂರು ಗ್ರಾಮದ ನಿವಾಸಿ, ಕೊಡಗು ಜಿಲ್ಲಾ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರ ಪುತ್ರ ಚಂದನ್ ಗೌಡ, ಮುಳ್ಳುಸೋಗೆ ಗ್ರಾಮದ ಲಿಖಿತ್, ಕೂಡಿಗೆಯ ಅಕ್ಷತಾ, ಆರ್ಜಿ ಗ್ರಾಮದ ಶಾರುಖ್, ಗೋಣಿಕೊಪ್ಪ, ಪೊನ್ನಂಪೇಟೆ, ಶನಿವಾರಸಂತೆ, ಅಮ್ಮತ್ತಿ ಮುಂತಾದೆಡೆಯ ಬಿ.ವಿ.ಅಶ್ವಿನ್ ಕುಮಾರ್, ಅಲಿಶಾ ಸೈಯದ್ ಅಲಿ, ಅಕ್ಷಿತಾ ಅಕ್ಕಮ್ಮ, ಎಂ.ಪಿ.ನಿರ್ಮಲಾ, ಅರ್ಜುನ್ ವಸಂತ್, ಸಿನಿಯಾ ವಿ.ಜೆ, ತೇಜಸ್ವಿನಿ ಕಾಂತರಾಜ್, ಶೀತಲ್ ಸಂಪತ್ ಮುಂತಾದವರು ಉಕ್ರೇನ್’ನಲ್ಲಿ ಸಿಲುಕಿಕೊಂಡಿರುವುದಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳು ಎಂಬುದೇ ವಿಶೇಷ.
ಉಕ್ರೇನ್‍ನ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆ, ತೀವ್ರ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಚಂದನ್ ಗೌಡ ಅವರನ್ನು ದೂರವಾಣಿಯ ಮೂಲಕ ತಂದೆ ಕೆ.ಕೆ.ಮಂಜುನಾಥ್ ಕುಮಾರ್ ಸಂಪರ್ಕಿಸಿ, ಯೋಗ ಕ್ಷೇಮ ವಿಚಾರಿಸಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‍ನಲ್ಲಿರುವ ಚಂದನ್ ಗೌಡ, ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರದ ಸೂಚನೆಯಂತೆ ಇತರರೊಂದಿಗೆ ಮೆಟ್ರೋ ನೆಲ ಮಾಳಿಗೆಯಲ್ಲಿ ಆಶ್ರಯ ಪಡೆದಿದ್ದಾರೆ. ನೀರು, ಆಹಾರಕ್ಕೆ ಯಾವುದೇ ಸಮಸ್ಯೆ ಇಲ್ಲಿಯವರೆಗೆ ಎದುರಾಗಿಲ್ಲವೆಂದು ಪುತ್ರ ತಿಳಿಸಿರುವುದಾಗಿ ಮಂಜುನಾಥ್ ಕುಮಾರ್ ಹೇಳಿದ್ದಾರೆ. ದೂರ ದೇಶದಲ್ಲಿ ಆತಂಕದ ನಡುವೆ ಪುತ್ರ ಸಿಲುಕಿರುವ ಬಗ್ಗೆ ಅತೀವ ಆತಂಕ ವ್ಯಕ್ತಪಡಿಸಿ ಅವರು ಗದ್ಗದಿತರಾದರು.
ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಮತ್ತೊಬ್ಬ ವಿದ್ಯಾರ್ಥಿ ಶಾರುಖ್ ಮನೆಯಲ್ಲಿ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮೆಟ್ರೋದ ನೆಲ ಮಾಳಿಗೆಯಲ್ಲಿ ಭಯ ಆತಂಕಗಳ ನಡುವೆ ಇತರರೊಂದಿಗೆ ರಕ್ಷಣೆ ಪಡೆಯುತ್ತಿದ್ದು, ಆತನನ್ನು ಸಂಪರ್ಕಿಸಿದ ಸಂದರ್ಭ ಮೊಬೈಲ್ ಚಾರ್ಜ್ ಸಹ ಇಲ್ಲದೆ ಆತ ತೊಂದರೆ ಒಳಗಾಗಿದ್ದಾರೆ. ಇದೀಗ ಮೊಬೈಲ್ ನೆಟ್’ವರ್ಕ್ ಸಹ ಇಲ್ಲದೆ ಕಳೆದೊಂದು ದಿನದಿಂದ ಸಂಪರ್ಕ ಸಾಧ್ಯವಾಗದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ವದೇಶಕ್ಕೆ ಕರೆಸಿಕೊಳ್ಳಿ : ಚಂದನ್ ಮನವಿ
‘ಯುದ್ಧದ ಸಂಕಷ್ಟದಲ್ಲಿರುವ ಉಕ್ರೇನ್‍ನಿಂದ ಭಾರತಕ್ಕೆ ನಮ್ಮನ್ನು ಕರೆಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ. ಇದೊಂದೆ ನನ್ನ ವಿನಂತಿ..’
ಉಕ್ರೇನ್‍ನ ಕಾರ್ಕಿವ್ ಪಟ್ಟಣದಿಂದ ವಿಡಿಯೋ ಮೂಲಕ ಮಾತನಾಡಿರುವ ಕೂಡ್ಲೂರಿನ ಚಂದನ್ ಗೌಡ, ಉಕ್ರೇನ್‍ನಲ್ಲಿ ಶಿಕ್ಷಣಕ್ಕಾಗಿ ಬಂದ ಭಾರತೀಯರು ಸುಮಾರು 15 ಸಾವಿರದಷ್ಟು ಇರಬಹುದು. ನಾನಿರುವ ಕಾರ್ಕಿವ್‍ನಲ್ಲಿ 150 ರಿಂದ 200 ಮಂದಿ ಕರ್ನಾಟಕದ ವಿದ್ಯಾರ್ಥಿಗಳು ಇದ್ದೇವೆ. ಯುದ್ಧದ ಹಿನ್ನೆಲೆಯಲ್ಲಿ ನಮ್ಮನ್ನು ಬಾಂಬ್ ಷೆಡ್ಡರ್ಸ್’ಗಳಲ್ಲಿ ಇರುವಂತೆ ಸರ್ಕಾರ ತಿಳಿಸಿದೆ. ಆದರೆ, ಅಗತ್ಯ ಆಹಾರ ವ್ಯವಸ್ಥೆ ಇಲ್ಲ. ನಾವಿರುವ ಮನೆಯಲ್ಲಿ ಎರಡು ಮೂರು ದಿನಗಳಿಗೆ ಆಗುವಷ್ಟು ಮಾತ್ರ ಆಹಾರವಿದೆಯೆಂದು ತಿಳಿಸಿದ್ದಾರೆ.
ಕಾರ್ಕಿವ್ ಪಟ್ಟಣ ಗಡಿ ಭಾಗದಿಂದ ಕೇವಲ 15 ರಿಂದ 20 ಕಿ.ಮೀ. ನಷ್ಟು ದೂರದಲ್ಲಿದ್ದು, ಯಾವ ಕ್ಷಣದಲ್ಲಿ ಗುಂಡಿನ ದಾಳಿ, ಬಾಂಬ್ ದಾಳಿ ನಡೆಯುತ್ತದೋ ಗೊತ್ತಾಗುವುದಿಲ್ಲ. ನಮ್ಮನ್ನು ಇಲ್ಲಿಂದ ಹೊರ ಕರೆದೊಯ್ಯಬೇಕು ಎಂದು ತಿಳಿಸಿದರು.
ನಾವಿರುವ ಸ್ಥಳದಿಂದ ಉಕ್ರೇನ್‍ನ ಪಶ್ಚಿಮ ಭಾಗಕ್ಕೆ 1500 ಕಿ.ಮೀ. ತೆರಳಿ, ಬಳಿಕ ಪೋಲೆಂಡ್ ಮೂಲಕ ಭಾರತಕ್ಕೆ ಕರೆದೊಯ್ಯಬೇಕು. ಆದರೆ, ಪ್ರಸ್ತುತ ಯಾವುದೇ ವಾಹನ ವ್ಯವಸ್ಥೆಗಳು ಇಲ್ಲಿ ಇಲ್ಲವೆಂದು ಅಳಲು ತೋಡಿಕೊಂಡಿದ್ದು, ಸ್ವದೇಶಕ್ಕೆ ನಮ್ಮನ್ನು ಕರೆಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.