ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರದ ಶಾಲೆಯೊಂದರಲ್ಲಿ ಆಹಾರ ಸೇವಿಸಿದ 100 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಪಲ್ನಾಡು ಜಿಲ್ಲೆಯ ಸಟ್ಟೇನಪಲ್ಲಿ ತಾಲೂಕಿನ ರಾಮಕೃಷ್ಣಾಪುರಂ ಗುರುಕುಲ ಶಾಲೆಯಲ್ಲಿ ಮಕ್ಕಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ.
ವಿದ್ಯಾರ್ಥಿಗಳು ಬೆಳಗ್ಗೆ ಟೊಮ್ಯಾಟೊ ಬಾತ್ ಚಟ್ನಿ ಹಾಗೂ ಮಧ್ಯಾಹ್ನ ಚಿಕನ್ ಊಟ ಮಾಡಿದ್ದಾರೆ. ಇದಾದ ನಂತರ ಮಕ್ಕಳು ಏಕಾಏಕಿ ಹೊಟ್ಟೆ ನೋವು ಹಾಗೂ ತಲೆಸುತ್ತು ಎಂದು ಹೇಳಿದ್ದಾರೆ.
ನೂರಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ, ಬೇಧಿ, ಹೊಟ್ಟೆ ನೋವು ಕಾಣಿಸಿದ್ದು, ನಿತ್ರಾಣರಾಗಿ ಪ್ರಜ್ಞೆತಪ್ಪಿದ್ದಾರೆ. ತಕ್ಷಣವೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್‌ನಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ. ಆತಂಕ ಪಡುವ ಅಗತ್ಯ ಇಲ್ಲ. ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆ. ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.