ಹೊಸದಿಗಂತ ವರದಿ ವಿಜಯಪುರ:
ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿ, 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಲೋಯಲಾ ಶಾಲೆಯ ಹತ್ತಿರ ನಡೆದಿದೆ.
ಜಿಲ್ಲೆಯ ಬೇವಿನಾಳ ಗ್ರಾಮದ ಲಕ್ಷ್ಮೀ ಶೇಗುಣಸಿ, ದ್ರಾಕ್ಷಾಯಿಣಿ ಹಿರೇಮಠ, ಅನುರಾಧಾ ಮೇಟಿ, ನೀಲವ್ವ ಮೇಟಿ ಸೇರಿದಂತೆ 15 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಮಕ್ಕಳು, ಮಹಿಳೆ ಹಾಗೂ ವೃದ್ಧರು ಸೇರಿದ್ದಾರೆ.
ಬೇವಿನಾಳ ಗ್ರಾಮದಿಂದ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದ ಭಾಗ್ಯವಂತಿ ದೇವಿ ದೇವಸ್ಥಾನಕ್ಕೆ ಜವಳ ಕಾರ್ಯಕ್ರಮಕ್ಕೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.