ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮಾಲಿನ್ಯ ನಿಯಂತ್ರಣ ಮತ್ತು ಸಾರಿಗೆ ಸುಧಾರಣೆಯ ನಿಟ್ಟಿನಲ್ಲಿ, 15 ವರ್ಷ ಪೂರೈಸಿರುವ ಎಲ್ಲಾ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಗುಜರಿ ಮಾಡುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ 12 ರಂದು ಹೊರಡಿಸಲಾದ ಆದೇಶದಂತೆ, ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳು, ನಗರಸಭೆಗಳು ಹಾಗೂ ಇತರೆ ಅಧೀನ ಸಂಸ್ಥೆಗಳ ಮಾಲೀಕತ್ವದ 15 ವರ್ಷ ಮೀರಿದ ವಾಹನಗಳನ್ನು ಅಧಿಕೃತ ‘ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳಲ್ಲಿ’ ವಿಲೇವಾರಿ ಮಾಡುವುದು ಈಗ ಕಡ್ಡಾಯವಾಗಿದೆ.
ಸದಸ್ಯ ಗೋವಿಂದ ರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ‘ವಾಹನ್’ ಪೋರ್ಟಲ್ ನೀಡಿರುವ ಅಂಕಿಅಂಶಗಳನ್ನು ಹಂಚಿಕೊಂಡರು:
ಒಟ್ಟು 18,552 ಸರ್ಕಾರಿ ವಾಹನಗಳ (ಬಸ್ ಹೊರತುಪಡಿಸಿ) ನೋಂದಣಿಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ.
ಈ ಪೈಕಿ ಕೇವಲ 1,493 ವಾಹನಗಳನ್ನು ಮಾತ್ರ ಸ್ಕ್ರ್ಯಾಪ್ ಮಾಡಲಾಗಿದೆ.
ಇನ್ನೂ 17,059 ವಾಹನಗಳನ್ನು ಗುಜರಿ ಮಾಡುವ ಪ್ರಕ್ರಿಯೆ ಬಾಕಿ ಉಳಿದಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸಂಬಂಧಿಸಿದಂತೆ, 2023 ರಿಂದ ಈವರೆಗೆ 3,212 ವಾಹನಗಳು ಸೇವೆಯಿಂದ ನಿಷ್ಕ್ರಿಯಗೊಂಡಿವೆ. ಉಳಿದಂತೆ 579 ವಾಹನಗಳನ್ನು ಹಂತ-ಹಂತವಾಗಿ ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

