ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ವಿವಿಧ ಕಾರಣಗಳಿಂದಾಗಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಸಂಚಾರ ರದ್ದುಗೊಂಡಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂಡಿಗೋ ಕಾರ್ಯಾಚರಣೆಯ ವಿಳಂಬದಿಂದಾಗಿ ಅನೇಕರು 14 ಗಂಟೆಗಳಿಗಿಂತಲೂ ಹೆಚ್ಚು ಕಾಲ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು.
ವಿಮಾನಯಾನ ಸಂಸ್ಥೆಯು ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸೋಮವಾರ ಹೊಸ ನಿಯಮಗಳನ್ನು ಜಾರಿಗೆಗೊಳಿಸಿದ್ದು, ಇದರ ಬಳಿಕ ಸಿಬ್ಬಂದಿ ಕೊರತೆಯನ್ನು ಎದುರಿಸಿದೆ. ಇದು ವಿಮಾನ ಹಾರಾಟಕ್ಕೆ ತೊಂದರೆಯನ್ನು ಉಂಟು ಮಾಡಿತು.
ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸೇರಿದ್ದು, ದೀರ್ಘ ವಿಳಂಬ ಮತ್ತು ಸಂವಹನ ಕೊರತೆಯ ಬಗ್ಗೆ ವಿಮಾನಯಾನ ಸಂಸ್ಥೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದರು.
ವಿಮಾನ ಹಾರಾಟವಿಲ್ಲದೆ ಅನೇಕ ಪ್ರಯಾಣಿಕರು ನಿಲ್ದಾಣಗಳಲ್ಲಿ 12 ರಿಂದ 14 ಗಂಟೆಗಳ ಕಾಲ ಸಿಲುಕಿಕೊಂಡರು. ವಿಮಾನ ಸಂಚಾರದ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ನಿಲ್ದಾಣಗಳಲ್ಲಿ ದೀರ್ಘವಾದ ಸರತಿ ಸಾಲುಗಳು ಕಂಡುಬಂದವು. ಇದರಿಂದ ತೊಂದರೆಗೆ ಒಳಗಾದ ಅನೇಕ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡರು.
ಇಂಡಿಗೋ ಹೇಳುವುದೇನು?
ಸಣ್ಣ ತಂತ್ರಜ್ಞಾನದ ದೋಷಗಳು, ಚಳಿಗಾಲಕ್ಕೆ ಸಂಬಂಧಿಸಿದ ವೇಳಾಪಟ್ಟಿ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಯುಯಾನ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ ಎಂದು ಇಂಡಿಗೋ ಹೇಳಿದೆ.
ಈ ಎಲ್ಲಾ ಸಮಸ್ಯೆಗಳ ಪೈಕಿ ಸಿಬ್ಬಂದಿ ರೋಸ್ಟರಿಂಗ್ ನಿಯಮವನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಇಂಡಿಗೋ ವಿಮಾನದ ಹಾರಾಟದಲ್ಲಿ ಸಮಸ್ಯೆಯಾಗಿದೆ.
ಭಾರತದ ವಿಮಾನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಹಳ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೈಲಟ್‌ಗಳ ಕೊರತೆ ಇದ್ದರೂ ಇರುವ ಪೈಲಟ್‌ಗಳ ಮೇಲೆ ಕಂಪನಿಗಳು ಹೆಚ್ಚಿನ ಒತ್ತಡ ಹಾಕಿಸುತ್ತವೆ ಎಂಬ ದೂರುಗಳು ಬರುತ್ತಿದ್ದವು. ಸಿಬ್ಬಂದಿ ಆರೋಗ್ಯ, ಮಾನಸಿಕ ಆರೋಗ್ಯ.. ಇತ್ಯಾದಿ ಸಮಸ್ಯೆಯನ್ನು ಪರಿಗಣಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಾಕಷ್ಟು ವಿಶ್ರಾಂತಿ ನೀಡಲು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮವನ್ನು ಕಂಪನಿಗಳು ಈಗ ಕಡ್ಡಾಯವಾಗಿ ಪಾಲನೆ ಮಾಡಬೇಕಾದ ಕಾರಣ ಇಂಡಿಗೋ ಕಾರ್ಯಾಚರಣೆಯಲ್ಲಿ ಸಮಸ್ಯೆ ಆರಂಭವಾಗಿದೆ.
ಯಾವ ನಿಯಮಗಳು ಏನು ಬದಲಾವಣೆಯಾಗಿದೆ?
ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿಗೆ ಒಂದು ದಿನದಲ್ಲಿ ಒಟ್ಟು 10-13 ಗಂಟೆ ಕರ್ತವ್ಯ ಮಾಡಬಹುದಿತ್ತು. ಆದರೆ ವಿಮಾನಯಾನ ರೋಸ್ಟರ್ ಮಾನದಂಡಗಳ ಪ್ರಕಾರ ಈಗ ಗರಿಷ್ಠ 10 ಗಂಟೆ ಮಾತ್ರ ನಿಗದಿ ಮಾಡಲಾಗಿದೆ.
ಈ ಮೊದಲು ವಾರದಲ್ಲಿ ಕನಿಷ್ಠ 36 ಗಂಟೆ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಈಗ ಕನಿಷ್ಠ 48 ಗಂಟೆ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಬಳಿಕ 10 ಗಂಟೆ ವಿಶ್ರಾಂತಿ ಪಡೆಯಬಹುದಾಗಿತ್ತು. ಆದರೆ ಈಗ ಈ ಅವಧಿಯನ್ನು12 ಗಂಟೆಗೆ ವಿಸ್ತರಿಸಲಾಗಿದೆ. ಮೊದಲು ರಾತ್ರಿ ಸಮಯದಲ್ಲಿ 6 ಬಾರಿ ಲ್ಯಾಂಡಿಂಗ್ ಮಾಡಲು ಅವಕಾಶವಿತ್ತು. ಆದರೆ ಈಗ 2 ಬಾರಿ ಮಾತ್ರ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗಿದೆ.
ದಿನಕ್ಕೆ 8-10 ಗಂಟೆಗಳು, ವಾರಕ್ಕೆ 30 ಗಂಟೆಗಳು ಅಥವಾ 28 ದಿನಗಳಲ್ಲಿ ಗರಿಷ್ಠ100 ಗಂಟೆ ವಿಮಾನ ಹಾರಾಟಕ್ಕೆ ಸಮಯ ಮಿತಿಯನ್ನು ಹಾಕಲಾಗಿದೆ. ಇದು ವಾರ್ಷಿಕವಾಗಿ 1,000 ಗಂಟೆಗಳಿಗಿಂತ ಹೆಚ್ಚಿರಬಾರದು. ಯಾವುದೇ ವಿಮಾನಯಾನ ಸಂಸ್ಥೆಯು ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಯನ್ನು ಈ ಮಿತಿಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸುವಂತಿಲ್ಲ.
ಇಂಡಿಗೋಗೆ ಮಾತ್ರ ಯಾಕೆ ಸಮಸ್ಯೆ?
ಇನ್ನು ಈ ಸಮಸ್ಯೆ ಅತೀ ಹೆಚ್ಚು ಕಾಣಿಸಿಕೊಂಡಿದ್ದು, ಇಂಡಿಗೋ ವಿಮಾನದಲ್ಲಿ ಮಾತ್ರ. ಇದಕ್ಕೆ ಕಾರಣ, ದೇಶದ ವಾಯುಯಾನ ಮಾರುಕಟ್ಟೆಯಲ್ಲಿ ಇಂಡಿಗೋ 64% ಪಾಲನ್ನು ಹೊಂದಿದ್ದು ಏರ್ ಇಂಡಿಯಾ 27% ಪಾಲನ್ನು ಹೊಂದಿದೆ. ಇಂಡಿಗೋ ಪ್ರತಿದಿನ 2,200 ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ. ಇದು ಏರ್ ಇಂಡಿಯಾ ಒಂದು ದಿನದಲ್ಲಿ ಕಾರ್ಯನಿರ್ವಹಿಸುವ ವಿಮಾನಗಳ ಸಂಖ್ಯೆಯ ಎರಡು ಪಟ್ಟು ಹೆಚ್ಚು.
ಬೇರೆ ಕಂಪನಿಗಳಿಗೆ ಹೋಲಿಸಿದರೆ ಇಂಡಿಗೋ ಕಡಿಮೆ ವೆಚ್ಚದ ವಿಮಾನ ಸೇವೆಗಳನ್ನು ನೀಡುತ್ತಿದೆ. ರಾತ್ರಿ ಸಮಯದಲ್ಲೇ ಹೆಚ್ಚಿನ ವಿಮಾನಗಳನ್ನು ಹಾರಿಸುತ್ತದೆ. ಡಿಜಿಸಿಎ ರಾತ್ರಿ ವಿಮಾನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿ ಮಾಡಿದ್ದು ಇಂಡಿಗೋಗೆ ಬಹಳ ಹೊಡೆತ ನೀಡಿದೆ.
ಡಿಜಿಸಿಎ ಜನವರಿಯಲ್ಲೇ ಈ ನಿಯಮ ಜಾರಿ ಮಾಡಿದ್ದರೂ ಕಂಪನಿಗಳು ಹಂತ ಹಂತವಾಗಿ ಈ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸೂಚಿಸಿತ್ತು. ಜುಲೈ 1 ರಂದು ಮೊದಲ ಹಂತ ಜಾರಿಯಾಗಿತ್ತು. ಈ ಸಂದರ್ಭದಲ್ಲಿ 15 ಷರತ್ತುಗಳು ಸಡಿಲವಾಗಿತ್ತು. ನವೆಂಬರ್ 1 ರಿಂದ ನೈಟ್ ಲ್ಯಾಂಡಿಂಗ್ ಸೇರಿದಂತೆ ಉಳಿದ ಷರತ್ತುಗಳು ಜಾರಿಯಾದವು. ಉಳಿದ ಕಂಪನಿಗಳಿಗೆ ಇಂಡಿಗೋದಷ್ಟು ವಿಮಾನಗಳನ್ನು ಹಾರಿಸದ ಕಾರಣ ಅವುಗಳಿಗೆ ಇಷ್ಟೊಂದು ಸಮಸ್ಯೆಯಾಗಿಲ್ಲ. ಆದರೆ ಇಂಡಿಗೋ ಸಂಸ್ಥೆ ತನ್ನ ಸಿಬ್ಬಂದಿ ವೇಳಾಪಟ್ಟಿಯನ್ನು ಸರಿಯಾಗಿ ಮಾಡದ ಕಾರಣ ಈಗ ದಿಢೀರ್ ಸಮಸ್ಯೆಯಾಗಿದೆ.

