ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ರಾಯಚೂರಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಬಾಲಕನೋರ್ವ ಮೃತಪಟ್ಟ ಘಟನೆ ನಡೆದ ಬೆನ್ನಲ್ಲೇ ಇನ್ನೊಂದು ದುರಂತ ಬೆಳಕಿಗೆ ಬಂದಿದೆ. ರೇಕಲಮರಡಿ ಗ್ರಾಮ ವ್ಯಾಪ್ತಿಯ ಮತ್ತೊಂದು ಗ್ರಾಮದಲ್ಲಿ ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವುದಾಗಿ ತಿಳಿದು ಬಂದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋರೆಬಾಳ ಗ್ರಾಮದಲ್ಲಿ ಒಂದು ವಾರದ ಹಿಂದೆ ನಡೆದಂತ ಘಟನೆ, ಇಂದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಕಲುಷಿತ ನೀರು ಕುಡಿದ ತಕ್ಷಣ, ಗೊರೆಬಾಳ ಗ್ರಾಮದಲ್ಲಿನ ಜನರಲ್ಲಿ ಹೊಟ್ಟೆ ನೋವು, ವಾಂತಿ, ಬೇಧಿ ಕಾಣಿಸಿಕೊಂಡಿದೆ. ಈ ಪೈಕಿ ಮೂವರು ಲಿಂಗಸೂಗೂರಿನಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈಗ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಅಸ್ವಸ್ಥಗೊಂಡ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಜನರು ಅಸ್ವಸ್ಥಗೊಳ್ಳಲು ಕಲುಷಿತ ನೀರು ಕಾರಣವೆನ್ನಲಾಗುತ್ತಿದೆ. ಈ ಸಂಬಂಧ ತಪ್ಪಿತತ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.