ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಆಹಾರ ಸೇವೆಸಿ 50ಕ್ಕೂ ಹೆಚ್ಚು ಮಂದಿ ಭಕ್ತರು ಅಸ್ವಸ್ಥರಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನದ ಅರಸೀಕೆರೆ ತಾಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ಇರುವ ವೆಂಕಟೇಶ್ವರ ಸ್ವಾಮಿ ದೇಗುಲದ ಜಾತ್ರೆಯಲ್ಲಿ ಭಾನುವಾರ ರಾತ್ರಿ ಸುಮಾರು ಒಂದುವರೆ ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗಿತ್ತು. ಈ ದೇಗುಲ ಚಿಕ್ಕ ತಿರುಪತಿ ಇಂದೇ ಪ್ರಸಿದ್ಧವಾಗಿದ್ದು, ಜಾತ್ರೆಗೆ ಸಾವಿರಾರು ಜನ ಆಗಮಿಸಿದ್ದರು.
ಖಾಸಗಿ ಸಂಸ್ಥೆಯೊಂದರ ವತಿಯಿಂದ ಭಕ್ತರಿಗೆ ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ವಿತರಣೆ ಮಾಡಲಾಗಿತ್ತು. ಭಾನುವಾರ ರಾತ್ರಿ 7.30 ರಿಂದ ಆಹಾರ ವಿತರಣೆ ಮಾಡಲಾಗಿತ್ತು. ಜಾತ್ರೆಯಲ್ಲಿ ಆಹಾರ ಸೇವಿಸಿದ ಸುಮಾರು 50ಕ್ಕೂ ಹೆಚ್ಚು ಭಕ್ತರಲ್ಲಿ ಸೋಮವಾರ ಮುಂಜಾನೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಸ್ವಸ್ಥರಾದವರ ಪೈಕಿ 20 ಮಂದಿ ಗುಣಮುಖರಾಗಿದ್ದು, 30ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಭಕ್ತರಿಗೆ ನೀಡಿದ್ದ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ. ತಕ್ಷಣವೇ ಚಿಕಿತ್ಸೆ ದೊರೆತಿದ್ದರಿಂದ ಅನೇಕ ಭಕ್ತರು ಅಪಾಯದಿಂದ ಪಾರಾಗಿದ್ದಾರೆ.