ಹೊಸದಿಗಂತ ವರದಿ, ಮೈಸೂರು:
ಕೆರೆಯಲ್ಲಿ ಕಲುಷಿತ ನೀರು ಕುಡಿದು ೫೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದಲ್ಲಿ ನಡೆದಿದೆ.
ಶಿರಾ ತಾಲ್ಲೂಕಿನ ಬಾಣಗೆರೆ ಗ್ರಾಮದ ರಂಗಸ್ವಾಮಿ ಎಂಬುವವರು ಗುರುವಾರ ಕೂಗಲೂರು ಗ್ರಾಮದ ಕೆರೆಯಲ್ಲಿ ನೀರು ಕುಡಿಸಿದ ಬಳಿಕ ಮೇಯಿಸಲು ಹೋದ ಸಂದರ್ಭದಲ್ಲಿ ಕುರಿಗಳು ಅಸ್ವಸ್ಥಗೊಂಡು, ಒದ್ದಾಡಿ ಸಾವನ್ನಪ್ಪಿವೆ. ಕೆರೆಯ ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣವಾಗಿ ನೀರು ಕಲುಷಿತವಾಗಿರಬಹುದು ಎಂದು ಶಂಕಿಸಲಾಗಿದೆ. ಲಕ್ಷಾಂತರ ರೂ . ಮೌಲ್ಯದ ಕುರಿಗಳನ್ನು ಕಳೆದುಕೊಂಡ ರಂಗಸ್ವಾಮಿ ಕಣ್ಣೀರು ಹಾಕಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ