ಹೊಸದಿಗಂತ ಕುಶಾಲನಗರ:
ಮದುವೆಯ ಸಮಾರಂಭದಲ್ಲಿ ಊಟ ಸೇವನೆ ಮಾಡಿದ 60 ಕ್ಕೂ ಹೆಚ್ಚು ಮಂದಿಗೆ ವಾಂತಿಭೇದಿ ಕಾಣಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಕಲ್ಯಾಣ ಮಂಟಪೊಂದರಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಮದುವೆ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಊಟ ಸೇವನೆ ಮಾಡಿದ ಹಲವು ಮಂದಿ ವಾಂತಿ ಭೇದಿಯಿಂದಾಗಿ ಕುಶಾಲನಗರ, ಮೈಸೂರು, ಸಾಲಿಗ್ರಾಮದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಮದುವೆ ಸಮಾರಂಭದಲ್ಲಿ ರಾತ್ರಿ ಊಟ ಸೇವನೆ ಮಾಡಿದವರಿಗೆ ಮತ್ತು ಮರುದಿನ ಊಟ ಸೇವನೆ ಮಾಡಿದ ಹಲವು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡು ಹೆಬ್ಬಾಲೆ ಮತ್ತು ಕುಶಾಲನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾದಾಗ ಈ ವಿಷಯ ಬೆಳಕಿಗೆ ಬಂದಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೊಡಗಿನ ಮತ್ತು ಪಕ್ಕದ ಹಾಸನ ಹಾಗೂ ಮೈಸೂರು ಜಿಲ್ಲೆಯವರು ಸೇರಿದಂತೆ ಸಮಾರಂಭಕ್ಕೆ ಬಂದ ಹಲವರಲ್ಲಿ ವಾಂತಿ ಭೇದಿ ಸೋಂಕು ಕಾಣಿಸಿಕೊಂಡು ಮೈಸೂರು ಮತ್ತು ಹಾಸನ ಜಿಲ್ಲೆಯ ಕೆಲವು ಕಡೆಗಳ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕೆ. ಎಂ. ಸತೀಶ್, ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾಕುಮಾರಿ ನೇತೃತ್ವದಲ್ಲಿ ಅರೋಗ್ಯ ಇಲಾಖೆಯ ತಾಲೂಕು, ಮತ್ತು ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ತಂಡ ಹೆಬ್ಬಾಲೆಯಲ್ಲಿ ಎರಡು ದಿನ ಮೊಕ್ಕಾಂ ಹೂಡಿ, ಹೆಬ್ಬಾಲೆ ಮತ್ತು ಸುತ್ತಮುತ್ತಲಿನ ಗ್ರಾಮದವರು ವಾಂತಿ ಭೇದಿ ಹೆಚ್ಚಾಗಿ ಚಿಕಿತ್ಸೆಗಾಗಿ ಹೆಬ್ಬಾಲೆ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕುಶಾಲನಗರದ ಸಮುದಾಯದ ಅರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಿದ್ದು, ಇದೀಗ ಎಲ್ಲರೂ ಗುಣಮುಖರಾಗಿ ಅವರವರ ಮನೆಗಳಿಗೆ ತೆರಳಿದ್ದಾರೆ.
ವಾಂತಿಭೇದಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ತಂಡ ಮತ್ತು ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯವರು ಹೆಬ್ಬಾಲೆಯ ವಿವಿಧ ವಾರ್ಡ್’ಗಳ ಮನೆಗಳಿಗೆ ತೆರಳಿ ವಾಂತಿ ಭೇದಿ ಸೋಂಕು ಇರುವ ಬಗ್ಗೆ ಮಾಹಿತಿ ಪಡೆದು ಸೋಂಕುದಾರರ ಮಲ, ಮತ್ತು ಕಲ್ಯಾಣ ಮಂಟಪ ನೀರನ್ನು ಹಾಸನದಲ್ಲಿರುವ ತಪಾಸಣಾ ಪರೀಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.